ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ತುಮಕೂರಿನ ಬೆಳಗುಂಬಾದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ನಡೆದಿದೆ.
ಪ್ರಜ್ವಲ್ (14) ಹಾಗೂ ಯತೀಶ್ (14) ಸಾವನ್ನಪ್ಪಿದ ಮಕ್ಕಳು ಎಂದು ಗುರುತಿಸಲಾಗಿದೆ. ಈ ಇಬ್ಬರೂ ಮಕ್ಕಳು 8ನೇ ತರಗತಿಯಲ್ಲಿ ಓದುತ್ತಿದ್ದರು. ಮೃತ ಯತೀಶ್, ವೀರಭದ್ರಯ್ಯ ಎಂಬುವವರ ಮಗನಾಗಿದ್ದು, ಪ್ರಜ್ವಲ್ ಪಕ್ಕದ ಮನೆಯ ಸಿದ್ದಲಿಂಗಯ್ಯ ಎಂಬುವರ ಮಗನಾಗಿದ್ದಾನೆ. ಇಬ್ಬರು ಅಕ್ಕಪಕ್ಕದ ಮನೆ ನಿವಾಸಿಗಳು. ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಆಟವಾಡುತ್ತಿದ್ದರು. ಆದರೆ, ಮನೆಯೊಳಗೆ ಬಿಟ್ಟು ಹೊರಗೆ ಹೋಗಿ ಆಟವಾಡಿಕೊಳ್ಳುವಂತೆ ಮನೆಯವರು ಕಳುಹಿಸಿದ್ದಾರೆ. ಹೀಗಾಗಿ, ಮನೆಯ ಮೇಲೆ ಹೋಗಿ ಆಡುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬೆಸ್ಕಾಂ ಸಿಬ್ಬಂದಿಗೆ ಮನೆ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿಗಳಿಗೆ ಪ್ಲಾಸ್ಟಿಕ್ ಪೈಪ್ಗಳನ್ನು ಅಳವಡಿಸಿ ವಿದ್ಯುತ್ ಶಾಕ್ ಉಂಟಾಗದಂತೆ ಕ್ರಮವಹಿಸಲು ಮನೆಯವರು ಮನವಿ ಮಾಡಿದ್ದರು. ಆದರೆ, ಮನೆಯವರು ಹೇಳಿದರೂ, ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದರು. ಈಗ ಮನೆಯ ಮಕ್ಕಳು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದು, ಬೆಸ್ಕಾಂ ಸಿಬ್ಬಂದಿ ವಿರುದ್ಧ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.