Jammu And Kashmir: ಸೋಪುರ್ ನಲ್ಲಿ ನಡೆದ ಎನ್ಕೌಂಟರ್ ಗೆ ಇಬ್ಬರು ಉಗ್ರರು ಬಲಿ..
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಇಬ್ಬರು ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರಗಾಮಿಗಳನ್ನ ಎನ್‌ಕೌಂಟರ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತರಾದ ಜೆಇಎಂ ಭಯೋತ್ಪಾದಕರನ್ನ ಸೋಪೋರ್‌ನ ಮೊಹಮ್ಮದ್ ರಫಿ ಮತ್ತು ಪುಲ್ವಾಮಾದ ಕೈಸರ್ ಅಶ್ರಫ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕ ರಫಿ ಮೇಲೆ ಈ ಹಿಂದೆ ಎರಡು ಬಾರಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು. ಇಬ್ಬರೂ ಹಲವಾರು ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಸೋಪೋರ್ ಪ್ರದೇಶದಲ್ಲಿ ಅವರು ನಾಗರಿಕರ ಮೇಲೆ ದಾಳಿ ನಡೆಸಲು ಯೋಜಿಸಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾಶ್ಮೀರ ವಲಯ) ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಒಬ್ಬ ನಾಗರಿಕನಿಗೆ ಗಾಯಗಳಾಗಿದ್ದು, ಶ್ರೀನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರದಾದ್ಯಂತ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಸರಣಿ ಎನ್‌ಕೌಂಟರ್‌ಗಳು ನಡೆಯುತ್ತಿವೆ. ಅನೇಕ ಭಯೋತ್ಪಾದಕರು ಮತ್ತು ಅವರ ಕಮಾಂಡರ್‌ಗಳನ್ನು ನಿರ್ಮೂಲನೆ ಮಾಡಲಾಗಿದೆ.
ಮಂಗಳವಾರ, ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಾಗಬಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಹತರಾಗಿದ್ದಾರೆ.








