ಕುಡಿದ ಮತ್ತಿನಲ್ಲಿ ಕರ್ತವ್ಯ ಲೋಪವೆಸಗಿದ ಪೊಲೀಸರ ಅಮಾನತು
ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ವೇಗವಾಗಿ ವಾಹನ ಚಲಾಯಿಸಿ, ಬ್ಯಾರಿಕೇಡ್ ಗೆ ಗುದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಅಮಾನತು ಮಾಡಿರುವ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ-ಧಾರವಾಡ ಉತ್ತರ ಸಂಚಾರಿ ಠಾಣೆಯ ಎಎಸ್ಐ ಉದಯ ದೊಡ್ಡಮನಿ ಹಾಗೂ ಸಶಸ್ತ್ರ ಮೀಸಲು ಪಡೆಯ ಮುತ್ತು ಮಾಗಿ ಅಮಾನತಾದ ಪೊಲೀಸರು. ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಹು-ಧಾ ಫೋಲಿಸ್ ಆಯುಕ್ತ ಲಾಬೂರಾಮ್ ಆದೇಶ ಹೊರಡಿಸಿದ್ದಾರೆ.
ನಡೆದಿದ್ದು: ಹೋಳಿ ಹಬ್ಬದ ದಿನದಂದು ವಾಣಿಜ್ಯ ನಗರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಅವತ್ತು ಕರ್ತವ್ಯ ನಿರ್ವಹಣೆ ನಂತರ ಮುತ್ತು ಮಾಗಿ, ಉದಯ ದೊಡ್ಡಮನಿ ಹೈವೇ ಪೆಟ್ರೋಲಿಂಗ್ ವಾಹನವನ್ನು ತೆಗೆದುಕೊಂಡು ನಗರದ ಹೊರವಲಯಕ್ಕೆ ಹೋಗಿದ್ದಾರೆ.
ಮುತ್ತು ಮಾಗಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಗೆ ಗುದ್ದಿದ್ದಾರೆ. ಇದರಿಂದ ಮುತ್ತುಮಾಗಿ ಮತ್ತು ಉದಯ್ ದೊಡ್ಡಮನಿ ಗಂಭೀರ ಗಾಯಗೊಂಡಿದ್ದರು. ಘಟನೆಯ ಬಳಿಕ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು, ಈ ಇಬ್ಬರು ಪೊಲೀಸರು ಅಮಾನತು ಮಾಡಿದ್ದಾರೆ.