ರಾಜ್ಯ ಸರ್ಕಾರವು ಜೂನ್ 16ರಿಂದ ಬೈಕ್ ಟ್ಯಾಕ್ಸಿ ಸೇವೆಗಳ ಮೇಲೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಜನಪ್ರಿಯ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆದಾರರಾದ ಊಬರ್ (Uber), ಓಲಾ (Ola), ರಾಪಿಡೋ (Rapido) ತಮ್ಮ ಅಪ್ಲಿಕೇಶನ್‌ಗಳಲ್ಲಿ ‘ಬೈಕ್ ಟ್ಯಾಕ್ಸಿ’ ಎಂಬ ಹೆಸರನ್ನು ಸಂಪೂರ್ಣವಾಗಿ ತೆಗೆದು ಹಾಕಿವೆ.
ಈ ಹೆಸರಿನ ಬದಲಿಗೆ, ಊಬರ್ ತನ್ನ ಆ್ಯಪ್‌ನಲ್ಲಿ ಹೊಸದಾಗಿ ‘Motor Courier’ ಎಂಬ ವಿಭಾಗವನ್ನು ಪರಿಚಯಿಸಿದ್ದು, ರಾಪಿಡೋ ‘Bike Parcel’ ಎಂಬ ಹೊಸ ಆಯ್ಕೆಯನ್ನು ನೀಡಿದೆ. ಈ ಹೊಸ ಆಯ್ಕೆಗಳ ಮೂಲಕ ಕಂಪನಿಗಳು ಪಾರ್ಸೆಲ್ ಡೆಲಿವರಿ ಅಥವಾ ಕೊರಿಯರ್ ಸೇವೆ ನೀಡುವಂತೆ ತೋರುತ್ತಿದ್ದರೂ, ಬಹುತೇಕ ಬಳಕೆದಾರರು ಇದನ್ನು ಬೈಕ್ ಟ್ಯಾಕ್ಸಿ ಸೇವೆ ಎಂಬಂತೆ ಬಳಸುತ್ತಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬರುತ್ತಿವೆ.
ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಸರ್ಕಾರ ಮತ್ತು ಬೈಕ್ ಟ್ಯಾಕ್ಸಿ ಕಂಪನಿಗಳ ನಡುವೆ ವಿವಾದ ನಡೆದು ಬಂದಿತ್ತು. ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದ್ದರೂ, ಈ ಸೇವೆಗಳು ತಾತ್ಕಾಲಿಕವಾಗಿ ಮುಂದುವರೆದಿದ್ದವು. ಆದರೆ ಇದೀಗ ನಿಷೇಧದ ನೇರ ಪರಿಣಾಮವಾಗಿ ಕಂಪನಿಗಳು ತನ್ನ ಸೇವಾ ಶೈಲಿಯನ್ನು ಬದಲಾಯಿಸಿದೆ.
ವಾಸ್ತವದಲ್ಲಿ, ‘Motor Courier’ ಅಥವಾ ‘Bike Parcel’ ಎನ್ನುವುದು ಕಾನೂನುಬದ್ಧ ಪಾರ್ಸೆಲ್ ಸೇವೆಯಂತೆಯೇ. ಆದರೆ ಕೆಲವು ಬಳಕೆದಾರರು ಇದನ್ನು ಪ್ರಯಾಣಿಕರನ್ನು ಸಾಗಿಸಲು ಉಪಯೋಗಿಸುತ್ತಿದ್ದಾರೆ ಎಂಬ ಶಂಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿವೆ. X ನಲ್ಲಿ ಹಲವರು ಸ್ಕ್ರೀನ್ ಶಾಟ್ ಹಂಚಿಕೊಂಡು ಹೆಸರು ಬದಲಾಗಿದ್ರೂ ಕೆಲಸದ ಸ್ವರೂಪ ಅದೇ ಎಂದು ಟೀಕೆ ಮಾಡುತ್ತಿದ್ದಾರೆ.
ಸರ್ಕಾರದ ನಿಷೇಧದ ನಡುವೆಯೂ ಈ ರೀತಿಯ ವ್ಯವಹಾರಗಳು ನಡೆಯುತ್ತಿರುವುದನ್ನು ಗಮನಿಸಿ, ಸಾರಿಗೆ ಇಲಾಖೆ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಎಂಬ ನಿರೀಕ್ಷೆ ಇದೆ. ಇದೇ ವೇಳೆ, ಈ ಪರಿಸ್ಥಿತಿಯ ಬಗ್ಗೆ ಸರ್ಕಾರದಿಂದ ಸ್ಪಷ್ಟ ನಿಲುವು ಮತ್ತು ನಿಯಮಾವಳಿ ಹೊರಬರಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.