ಮಹಾರಾಷ್ಟ್ರ ರಾಜಕಾರಣದಲ್ಲಿ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ನಡುವಿನ ಮೈತ್ರಿ ಪ್ರಯತ್ನಗಳ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀವ್ರ ಟೀಕೆ ಮಾಡಿದ್ದಾರೆ.
ಉದ್ಧವ್–ರಾಜ್ ಸಹೋದರರ ಭೇಟಿ ರಷ್ಯಾ–ಉಕ್ರೇನ್ ನಡುವಿನ ಶಾಂತಿ ಮಾತುಕತೆಯಷ್ಟೇ ಮಹತ್ವದ್ದಾಗಿ ತೋರಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದ ಫಡ್ನವಿಸ್, ಈ ಮೈತ್ರಿ ಸಂಪೂರ್ಣವಾಗಿ ರಾಜಕೀಯ ಲಾಭಕ್ಕಾಗಿ ಮಾಡಿಕೊಳ್ಳುತ್ತಿರುವ ಒಡಂಬಡಿಕೆ ಮಾತ್ರ ಎಂದು ಹೇಳಿದ್ದಾರೆ.
ಶಿವಸೇನಾ (UBT) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಎರಡೂ ಪಕ್ಷಗಳು ತುಷ್ಟಿಕರಣ ರಾಜಕೀಯದಲ್ಲಿ ತೊಡಗಿವೆ. ಇಂತಹ ಪಕ್ಷಗಳ ಮೈತ್ರಿಯಿಂದ ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಫಡ್ನವಿಸ್ ಟೀಕಿಸಿದ್ದಾರೆ.
ತಮ್ಮ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಬದಿಗಿಟ್ಟು, ಕೇವಲ ಅಧಿಕಾರ ಮತ್ತು ಸ್ಥಾನಗಳಿಗಾಗಿ ಇವರು ಒಂದಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ, ಈ ಎರಡು ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿದರೆ ಗೆಲ್ಲುವ ಸಾಮರ್ಥ್ಯವೇ ಇಲ್ಲ. ಅದಕ್ಕಾಗಿಯೇ ಒಟ್ಟಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಮೈತ್ರಿಯ ನಿಜವಾದ ಉದ್ದೇಶ ಮತ್ತು ಪರಿಣಾಮಗಳನ್ನು ಜನರು ಸ್ಪಷ್ಟವಾಗಿ ನೋಡಲಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ.








