ಬೆಂಗಳೂರು: ನಾನು ಕ್ಷೇಮವಾಗಿದ್ದೇನೆ. ಯಾರೂ ಆತಂಕ ಪಡುವುದು ಬೇಡ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ಮೂಗಿನಿಂದ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಚಿಕಿತ್ಸೆ ಪಡೆದು ಜಯನಗರದ ಅಪೋಲೋ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ಭಗವಂತ ಹಾಗೂ ನಿಮ್ಮ ಆಶೀರ್ವಾದ ಇರುವವರೆಗೆ ನನಗೆ ಏನೂ ಆಗುವುದಿಲ್ಲ. ಮೂರು ಬಾರಿ ವಾಲ್ ರಿಪ್ಲೇಸ್‌ಮೆಂಟ್ ಆಗಿದೆ. ಬ್ಲಡ್ ಥಿನ್ನರ್ ತೆಗೆದುಕೊಳ್ಳುತ್ತೇನೆ. ಒತ್ತಡಗಳು ಜಾಸ್ತಿಯಾದಾಗ ಮೂಗಿನಿಂದ ರಕ್ತಸ್ರಾವ ಆಗುವುದು ಸಹಜ. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಯಾರೂ ಆತಂಕ ಪಡುವುದು ಬೇಡ ಎಂದು ಹೇಳಿದ್ದಾರೆ.
ನನ್ನ ಆರೋಗ್ಯ ಸಂಪೂರ್ಣ ಕೆಟ್ಟಿಲ್ಲ. ಪಾದಯಾತ್ರೆಗೆ ಇನ್ನೂ ಒಂದು ವಾರ ಇದೆ. ಆಮೇಲೆ ನೋಡೋಣ. ಅಂತಹ ಸಂದರ್ಭ ಬಂದರೆ ನಿಖಿಲ್ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯಸಭೆಯಲ್ಲಿ ಕಾವೇರಿ ನೀರಿನ ಪ್ರಸ್ತಾಪ ಬಂದೇ ಬರುತ್ತದೆ. ತಮಿಳುನಾಡಿನ ಬೇರೆ ಬೇರೆ ಪಕ್ಷದ ನಾಯಕರು ದೇವೇಗೌಡರ ಭಾಷಣಕ್ಕೆ ಹಲವು ವರ್ಷಗಳಿಂದ ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ ನಾನು ಅಂದು ಅಲ್ಲಿರಬೇಕು ಎಂಬುವುದು ನನ್ನ ಆಸೆ ಎಂದು ಹೇಳಿದ್ದಾರೆ.