ಅಮೆರಿಕದ ವೈಟ್ ಹೌಸ್, ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಕಚೇರಿಗಳನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿತ್ತು. ಆದರೆ ನಿನ್ನೆ ಅದು ಎಲ್ಲವನ್ನೂ ಅನ್ ಫಾಲೋ ಮಾಡಿದ್ದು, ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಆಗ ಫಾಲೋ ಮಾಡಿದ್ದು ಯಾಕೆ ಈಗ ಅನ್ ಫಾಲೋ ಮಾಡಿದ್ದು ಯಾಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡ ಬೆನ್ನಲ್ಲೇ ಇದೀಗ ಅಮೆರಿಕ ಶ್ವೇತ ಭವನ ಈ ಬಗ್ಗೆ ಸ್ಪಷ್ಟನೆ ನೀಡಿದೆ.
“ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರು ಬೇರೆ ದೇಶಗಳಿಗೆ ಭೇಟಿ ಕೊಟ್ಟಾಗ ವೈಟ್ ಹೌಸ್ ಆಯಾ ಆತಿಥೇಯ ದೇಶಗಳ ನಾಯಕರು, ಪ್ರಮುಖ ಕಚೇರಿಗಳನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತದೆ. ಆ ದೇಶಗಳ ನಾಯಕರು, ಕಚೇರಿಗಳು ಮಾಡುವ ಟ್ವೀಟ್ ಗಳನ್ನು ರೀಟ್ವೀಟ್ ಮಾಡಿಕೊಳ್ಳುವ ಸಲುವಾಗಿ ವೈಟ್ ಹೌಸ್ ಈ ಕ್ರಮ ಅನುಸರಿಸುತ್ತದೆ. ಆದರೆ ಇದು ಸೀಮಿತ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದಿದೆ ವೈಟ್ ಹೌಸ್.
ಫೆಬ್ರವರಿ ಕೊನೇ ವಾರದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ಈ ವೇಳೆ ವೈಟ್ ಹೌಸ್ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ಕಚೇರಿ, ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಭಾರತದಲ್ಲಿರುವ ಯುಎಸ್ ನ ರಾಯಭಾರಿ ಕಚೇರಿಗಳನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡಿಕೊಂಡಿತ್ತು. ಈಗ ಎಲ್ಲ ಟ್ವಿಟ್ಟರ್ ಅಕೌಂಟ್ ಗಳನ್ನೂ ವೈಟ್ ಹೌಸ್ ಅನ್ ಫಾಲೋ ಮಾಡಿದೆ.