Uttar Pradesh: ಗುಡಿಸಲಿಗೆ ಬೆಂಕಿ ತಗುಲಿ ತಾಯಿ ಮತ್ತು ನಾಲ್ವರು ಮಕ್ಕಳು ಸಾವು..
ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಗುಡಿಸಲಿಗೆ ಬೆಂಕಿ ತಗುಲಿ ತಾಯಿ ಮತ್ತು ಆಕೆಯ ನಾಲ್ಕು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಡುಗೆ ಮಾಡುವಾಗ ಕಿಡಿತಾಕಿ ಬೆಂಕಿ ಹೊತ್ತಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೌ ಜಿಲ್ಲೆಯ ಕೊಪಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಶಹಪುರ್ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಗುಡಿಸಲಿನಲ್ಲಿದ್ದ ನಾಲ್ವರು ಮಕ್ಕಳು ಮತ್ತು ಒಬ್ಬ ಮಹಿಳೆ ಸುಟ್ಟು ಕರಕಲಾಗಿದ್ದಾರೆ.
ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿ) ಅಖಿಲೇಶ್ ಕುಮಾರ್, ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಪಾಂಡೆ ಅವರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಗುಡ್ಡಿ ದೇವಿ ಎಂದು ಗುರುತಿಸಲಾದ ಮಹಿಳೆ ತನ್ನ ಮಕ್ಕಳೊಂದಿಗೆ ಗುಡಿಸಲಿನಲ್ಲಿ ವಾಸವಿದ್ದರು. ಪತಿ ರಾಮಶಂಕರ್ ಬೇರೆಡೆ ಕೆಲಸ ಮಾಡುತ್ತಿದ್ದ. ಅಡುಗೆ ಮಾಡುವಾಗ ಕಿಡಿ ಸಿಡಿದು ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Uttar Pradesh: Mother and four children die in hut fire.