ಕೇಂದ್ರ ಸರ್ಕಾರವು ವಿ. ನಾರಾಯಣನ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನೂತನ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ. ಅವರು ಜನವರಿ 14 ರಂದು ಪ್ರಸ್ತುತ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅನುಭವ ಮತ್ತು ಸಾಧನೆಗಳು
ವಿ. ನಾರಾಯಣನ್ ಅವರಿಗೆ ಸುಮಾರು ನಾಲ್ಕು ದಶಕಗಳ ಅನುಭವವಿದ್ದು, ಅವರು ಇಸ್ರೋದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ರಾಕೆಟ್ ಮತ್ತು ಬಾಹ್ಯಾಕಾಶ ನೌಕೆ ಪ್ರೊಪಲ್ಷನ್‌ನಲ್ಲಿ ಪರಿಣತಿಯನ್ನು ಹೊಂದಿದ್ದಾರೆ. GSLV Mk III ವಾಹನದ CE20 ಕ್ರಯೋಜೆನಿಕ್ ಎಂಜಿನ್ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ವಿದ್ಯಾಭ್ಯಾಸ ಮತ್ತು ವೃತ್ತಿಜೀವನ
1984 ರಲ್ಲಿ ಇಸ್ರೋಗೆ ಸೇರ್ಪಡೆಗೊಂಡ ವಿ. ನಾರಾಯಣನ್ ಅವರು, ಐಐಟಿ ಖರಗ್‌ಪುರದಲ್ಲಿ ಕ್ರಯೋಜೆನಿಕ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪೂರ್ಣಗೊಳಿಸಿದ್ದಾರೆ. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (VSSC) ASLV ಮತ್ತು PSLV ಯೋಜನೆಗಳಲ್ಲಿ ಕೆಲಸ ಮಾಡಿದರು. ನಂತರ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (LPSC) ನಲ್ಲಿ ಕ್ರಯೋಜೆನಿಕ್ ಪ್ರೊಪಲ್ಷನ್ ವಿಭಾಗವನ್ನು ಸೇರಿದರು.
ಪ್ರಶಸ್ತಿಗಳು ಮತ್ತು ಗೌರವಗಳು
ವಿ. ನಾರಾಯಣನ್ ಅವರಿಗೆ ಐಐಟಿ ಖರಗ್‌ಪುರದ ಬೆಳ್ಳಿ ಪದಕ, ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್‌ಐ) ಯಿಂದ ಚಿನ್ನದ ಪದಕ ಮತ್ತು ಎನ್‌ಡಿಆರ್‌ಎಫ್‌ನಿಂದ ರಾಷ್ಟ್ರೀಯ ವಿನ್ಯಾಸ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಸಂದಿವೆ.
ಎಸ್. ಸೋಮನಾಥ್ ಅವರ ಅಧಿಕಾರಾವಧಿ
ಪ್ರಸ್ತುತ ಹುದ್ದೆಯಿಂದ ನಿರ್ಗಮಿಸುತ್ತಿರುವ ಎಸ್. ಸೋಮನಾಥ್ ಅವರು ಜನವರಿ 2022 ರಲ್ಲಿ ಇಸ್ರೋ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಇಸ್ರೋವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ರೋವರ್ ಇಳಿಸುವ ಮೂಲಕ ಮಹತ್ವದ ಸಾಧನೆಗಳನ್ನು ಮಾಡಿದೆ.