ಹಿರಿಯ ನಟಿ, ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ ನಿಧನ….
ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪನವರ ಪತ್ನಿ, ಹಿರಿಯ ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ ಅವರು ಇಂದು ಮುಂಜಾನೆ ಧಾರವಾಡದ ರಜತಗಿರಿ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಸಿನಿಮಾ ಮತ್ತು ಕಿರುತೆರೆಯ ಖ್ಯಾತ ಕಲಾವಿದರ ಏಣಗಿ ನಟರಾಜ್ ಇವರ ಪುತ್ರರಾಗಿದ್ದಾರೆ.
ಬಾಳಪ್ಪನವರ ಜತೆ ಅನೇಕ ನಾಟಕಗಳಲ್ಲಿ ಅಭಿನಯಿಸಿರುವ ಲಕ್ಷ್ಮೀ ಬಾಯಿ, ಪುತ್ರ ನಟರಾಜ್ ಜೊತೆ ‘ಸಿಂಗಾರವ್ವ’ ಸಿನಿಮಾದಲ್ಲಿ ನಟಿಸಿದ್ದರು. ಮಧ್ಯಾಹ್ನ ಧಾರವಾಡದ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಲಕ್ಷ್ಮೀಬಾಯಿ ಅವರು ಬಾಳಪ್ಪನವರನ್ನು ಮದುವೆಯಾದ ನಂತರ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘದಲ್ಲಿ ಬಣ್ಣ ಹಚ್ಚುವುದಕ್ಕೆ ಶುರು ಮಾಡಿದರು. ಲಕ್ಷ್ಮಿಬಾಯಿ ಅವರು ಪಾತ್ರಗಳಿಗೆ ಬಣ್ಣ ಹಚ್ಚುವುದು ಆರಂಭಿಸಿದಾಗ ಬಾಳಪ್ಪ ಅವರು ಸ್ತ್ರೀ ಪಾತ್ರಗಳಿಗೆ ಬಣ್ಣ ಹಚ್ಚುವುದು ನಿಲ್ಲಿಸಿದರು. ಹೇಮರಡ್ಡಿ ಮಲ್ಲಮ್ಮ, ಪಠಾಣಿ ಪಾಷಾ, ಚಲೇಜಾವ್, ಕುರುಕ್ಷೇತ್ರ, ಕಿತ್ತೂರು ಚನ್ನಮ್ಮ, ಬಡತನ ಭೂತ, ದೇವರ ಮಗು… ಹೀಗೆ ಅನೇಕ ನಾಟಕಗಳಲ್ಲಿ ಲಕ್ಷ್ಮೀಬಾಯಿ ಅಭಿನಯಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ನೂರಕ್ಕೂ ಹೆಚ್ಚು ರಂಗ ಸನ್ಮಾನಗಳು ಅವರ ಮುಡಿಗೇರಿವೆ.