ಶ್ರೀನಗರ: 2018ರಲ್ಲಿ ನಡೆದಿದ್ದ ಉಗ್ರರ ದಾಳಿಗೆ ಬಲಿಯಾಗಿದ್ದ ವ್ಯಕ್ತಿಯೊಬ್ಬರ ಮಗಳು ಈಗ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಯಾಗಿದ್ದ ಅಜಿತ್ ಪರಿಹಾರ್ ಎಂಬುವರ ಮಗಳು ಶಗುನ್ ಪರಿಹಾರ್ (Shagun Parihar) ಬಿಜೆಪಿಯಿಂದ (BJP) ಜಮ್ಮು ಮತ್ತು ಕಾಶ್ಮೀರದ (Jammu Kashmir) ಕಿಶ್ತ್ವಾರ್ ನಿಂದ ಸ್ಪರ್ಧಿಸಿ 521 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಶಗುನ್ ಪರಿಹಾರ್ 29,053 ಮತಗಳನ್ನು ಪಡೆದಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್‌ನಿಂದ ಎರಡು ಬಾರಿ ಶಾಸಕರಾದ ಸಜ್ಜದ್ ಅಹ್ಮದ್ ಕಿಚ್ಲೂ 28,532 ಮತಗಳನ್ನು ಗಳಿಸಿ ಸೋಲು ಕಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 14 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ತಮ್ಮ ಮೊದಲ ಪ್ರಚಾರರದ ವೇಳೆ ಕೇಂದ್ರಾಡಳಿತ ಪ್ರದೇಶದಲ್ಲಿ ʻಭಯೋತ್ಪಾದನೆಯನ್ನು ಕೊನೆಗೊಳಿಸಲು ಬಿಜೆಪಿಯ ಸಂಕಲ್ಪಕ್ಕೆ ಜೀವಂತ ಉದಾಹರಣೆ ಎಂದು ಹೇಳಿದ್ದರು. ಬಿಜೆಪಿಯ ಶಗುನ್ ಪರಿಹಾರ್ ಅವರ ತಂದೆ ಅಜಿತ್ ಪರಿಹಾರ್ ಮತ್ತು ಜಿಲ್ಲಾ ಬಿಜೆಪಿ ನಾಯಕರಾಗಿದ್ದ ಅವರ ಚಿಕ್ಕಪ್ಪ ಅನಿಲ್ ಪರಿಹಾರ್ ರನ್ನು ಉಗ್ರರು ಹತ್ಯೆ ಮಾಡಿದ್ದರು.








