ನಾಯಕತ್ವಕ್ಕೆ ಗುಡ್ ಬೈ ಹೇಳ್ತಾರಂತೆ ವಿರಾಟ್ : ಶೀಘ್ರದಲ್ಲೇ ರೋಹಿತ್ ಗೆ ಪಟ್ಟ
ಬೆಂಗಳೂರು : ನಾಯಕತ್ವ ವಿಚಾರವಾಗಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿರುತ್ತಾರೆ.
ವಿರಾಟ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಅವರ ಬದಲಿಗೆ ರೋಹಿತ್ ಶರ್ಮಾಗೆ ನಾಯಕತ್ವ ನೀಡಬೇಕು ಎಂದು ಸಾಕಷ್ಟು ಬಾರಿ ಕ್ರಿಕೆಟ್ ದಿಗ್ಗಜರು ಸಲಹೆ ನೀಡಿದ್ದಾರೆ.
ಆದ್ರೆ ತಮ್ಮ ನಾಯಕತ್ವದ ಬಗ್ಗೆ ಟೀಕೆ ಮಾಡಿದವರಿಗೆ ವಿರಾಟ್ ತಮ್ಮ ಆಟದಿಂದಲೇ ತಿರುಗೇಟು ನೀಡಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ತಮ್ಮ ನಾಯಕತ್ವದ ತಾಕತ್ತು ಎಂಥಹದ್ದು ಎಂದು ಕ್ರಿಕೆಟ್ ಲೋಕಕ್ಕೆ ತೋರಿಸಿಕೊಟ್ಟಿದ್ದಾರೆ.
ವಿರಾಟ್ ನಾಯಕತ್ವದ ಬಗ್ಗೆ ಇಡೀ ಕ್ರಿಕೆಟ್ ಜಗತ್ತೇ ಮೆಚ್ಚಿಕೊಂಡು ಪ್ರಶಂಸೆಗಳನ್ನು ಸುರಿಸಿದೆ.
ಆದ್ರೆ ಇದೀಗ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದ್ದು, ವಿರಾಟ್ ಕೊಹ್ಲಿ ಟಿ20 ಮತ್ತು ಏಕದಿನ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಟಿ20 ವಿಶ್ವಕಪ್ ನಂತರ ಕೊಹ್ಲಿ ಭಾರತದ ವೈಟ್ ಬಾಲ್ ನಾಯಕತ್ವಕ್ಕೆ ಗುಡ್ ಬೈ ಹೇಳಲಿದ್ದಾರಂತೆ.
ಈ ಬಗ್ಗೆ ಬಿಸಿಸಿಐ ಜೊತೆಗೆ ವಿರಾಟ್ ಕೊಹ್ಲಿ ಚರ್ಚೆ ನಡೆಸಿ ತಮ್ಮ ನಿರ್ಧಾರವನ್ನು ಘೋಷಿಸಲಿದ್ದಾರಂತೆ.
ಸದ್ಯ ವಿರಾಟ್ ಭಾರತೀಯ ಕ್ರಿಕೆಟ್ ನ ಮೂರು ಮಾದರಿಗಳ ತಂಡಗಳನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಆದರೂ ಅವರು ರೋಹಿತ್ ಶರ್ಮಾ ರೊಂದಿಗೆ ನಾಯಕತ್ವದ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ನಿರ್ಧಾರ ಮಾಡಿದ್ದಾರಂತೆ.
ಯಾಕಂದ್ರೆ ವಿರಾಟ್ ತಮ್ಮ ಬ್ಯಾಟಿಂಗ್ ನತ್ತ ಗಮನ ಹರಿಸಲು ಈ ನಿರ್ದಾರಕ್ಕೆ ಬಂದಿದ್ದಾರಂತೆ.
ಎಲ್ಲ 3 ಮಾದರಿ ತಂಡದ ನಾಯಕತ್ವ ನಿಭಾಯಿಸಲು ಕಷ್ಟಸಾಧ್ಯವಾಗಿದ್ದು, ಇದು ಅವರ ಬ್ಯಾಟಿಂಗ್ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ.
ಈಗಾಗಿ ಅವರು ವೈಟ್ ಬಾಲ್ ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.