ವಯನಾಡು: ಭೂಕುಸಿತ (Wayanad Landslides) ದುರಂತ ನಡೆದು ಒಂದು ವಾರ ಕಳೆದಿದ್ದು, ಸಾವನ್ನಪ್ಪಿದವರ ಸಂಖ್ಯೆ 400 ರ ಗಡಿ ದಾಟಿದೆ.ಇನ್ನೂ 250ಕ್ಕೂ ಹೆಚ್ಚು ಜನ ಪತ್ತೆಯಾಗಬೇಕಿದೆ. ಮುಂಡಕ್ಕೈ, ಚುರಲ್ಮಲದಲ್ಲಿ ಶೋಧಕಾರ್ಯ ಮುಂದುವರಿದಿದೆ.
ಚಲಿಯಾರ್ ನದಿ ವ್ಯಾಪ್ತಿಯ 40 ಕಿಲೋಮೀಟರ್ ಉದ್ದಕ್ಕೂ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಾಂತನ್ಪಾರಾ ಹತ್ತಿರ ಅಪಾಯಕ್ಕೆ ಸಿಲುಕಿದ್ದ 18 ರಕ್ಷಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಗುಡ್ಡ ಕುಸಿತ ಸಂಭವಿಸುತ್ತಲೇ ಚುರುಲ್ಮಲದ (chooralmala) ನೀತು ಜೋಜೋ ಎಂಬ ಮಹಿಳೆ ಫೋನ್ ಮಾಡಿ ಸಹಾಯಕ್ಕೆ ಮೊರೆ ಇಟ್ಟಿದ್ರು. ಕೆಲವೇ ನಿಮಿಷ ನಿಮ್ಮನ್ನು ತಲುಪ್ತೀವಿ ಎಂದು ರಕ್ಷಣಾ ಪಡೆಗಳು ಭರವಸೆ ನೀಡಿದ್ವು. ಆದ್ರೆ, ಜಲಸ್ಫೋಟದ ತೀವ್ರತೆಯಿಂದ ಅವರನ್ನು ತಲುಪಲಾಗಲಿಲ್ಲ. ಆದರೆ, ಮಹಿಳೆಯ ಶವ ಪತ್ತೆಯಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.
ಚುರಲ್ಮಲದಲ್ಲಿ 16 ಮಂದಿಯ ಕೂಡು ಕುಟುಂಬದಲ್ಲಿ ಈಗ ಒಬ್ಬರಷ್ಟೇ ಉಳಿದಿದ್ದಾರೆ. ಅದು ಅವರು ಬೇರೆ ಕಡೆ ಹೋಗಿದ್ದರಿಂದ ಜೀವಂತವಾಗಿದ್ದಾರೆ. ಅಂದಿನಿಂದ ತಮ್ಮವರಿಗಾಗಿ ಹುಡುಕಾಟ ನಡೆಸಿದ್ದಾರೆ. ನಾಲ್ವರ ಶವಗಳಷ್ಟೇ ಸಿಕ್ಕಿವೆ. ಉಳಿದವರಿಗಾಗಿ ರಸೂಲ್ ಶೋಧ ಕಾರ್ಯ ಮಾಡುತ್ತಿದ್ದಾರೆ.