ನವದೆಹಲಿ: ಭೂಕುಸಿತದಿಂದಾಗಿ ತೀವ್ರ ಹಾನಿಗೊಳಗಾಗಿರುವ ಕೇರಳದ ವಯನಾಡಿಗೆ ಭೇಟಿ ನೀಡಿರುವ ಪ್ರದಾನಿ ನರೇಂದ್ರ ಮೋದಿ ಸಂತ್ರಸ್ತರ ನೋವು ಆಲಿಸಿ, ನಿಮ್ಮೊಂದಿಗೆ ಕೇಂದ್ರ ಸರ್ಕಾರ ಇದೆ ಎಂದು ಭರವಸೆ ನೀಡಿದ್ದಾರೆ.
ಹಣದ ಕೊರತೆಯಿಂದ ಯಾವುದೇ ಕೆಲಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು. ಕೇರಳ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ಸದಾ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭರವಸೆಯ ಮಾತುಗಳನ್ನಾಡಿದ್ದಾರೆ.
ಭೂಕುಸಿತ ಪೀಡಿತ ಕೇರಳದ (Kerala) ವಯನಾಡಿಗೆ (Wayanad Landslide) ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದರು. ನಂತರ ನೆರವಿನ ಕುರಿತು ಮಾತನಾಡಿದ ಅವರು, ಘಟನೆ ನಡೆದ ದಿನ ಬೆಳಗ್ಗೆ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅಗತ್ಯ ನೆರವು ನೀಡಲಾಗುವುದು ಎಂದು ಭರವೆ ನೀಡಿದ್ದಾರೆ.
ಮೃತರ ಕುಟುಂಬಗಳು ಒಬ್ಬಂಟಿಯಾಗಿಲ್ಲ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ನಾವೆಲ್ಲರೂ ಅವರೊಂದಿಗೆ ನಿಂತಿದ್ದೇವೆ. ಕೇಂದ್ರವು ಕೇರಳ ಸರ್ಕಾರದ ಜೊತೆ ನಿಂತಿದ್ದು, ಹಣದ ಕೊರತೆಯಿಂದ ಯಾವುದೇ ಕೆಲಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.