ನಾವು ಬಿಜೆಪಿಯಂತೆ ಹಣ ಹಂಚಿ ಮತ ಕೇಳುತ್ತಿಲ್ಲ : ಸಿದ್ದರಾಮಯ್ಯ Siddaramaiah saaksha tv
ಬೆಂಗಳೂರು : ರಾಜ್ಯ ಬಿಜೆಪಿ ಅವರಂತೆ ನಾವು ಹಣ ಹಂಚಿ ಮತ ಕೇಳುತ್ತಿಲ್ಲ. ಅಧಿಕಾರದಲ್ಲಿ ಇದ್ದಾಗ ಐದು ವರ್ಷ ನಿಮಗಾಗಿ ದುಡಿದಿದ್ದೇವೆ, ನಮ್ಮ ದುಡಿಮೆಗೆ ಕೂಲಿಯ ರೂಪದಲ್ಲಿ ಮತ ಕೊಡಿ ಎಂದು ಕೇಳುತ್ತಿದ್ದೇವೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಲ್ವಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಿಂಧಗಿ ಉಪಚುನಾವಣೆಯಲ್ಲಿ ಬಿಜೆಪಿ ಹಣ ಹಂಚುತ್ತಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಯಾವುದಾದರೂ ಒಂದು ಜನಪರ ಯೋಜನೆಯ ಹೆಸರು ಹೇಳಲಿ ನೋಡಣ. ಅವರಿಂದ ಸಾಧ್ಯವಿದೆಯಾ? ತಮ್ಮ ಬಣ್ಣ ಬಯಲಾಗುತ್ತೆ ಎಂದು ಹೆದರಿ ಒಂದೇ ವೇದಿಕೆಗೆ ಚರ್ಚೆಗೆ ಬರಲು ನಿರಾಕರಿಸಿದರು.
ಚುನಾವಣೆ ಕಾರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ ಗೆ 7400 ಮನೆಗಳನ್ನು ಮಂಜೂರು ಮಾಡಿ ಆದೇಶ ಪತ್ರ ಹಿಡಿದುಕೊಂಡು ಮತ ಕೇಳುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಒಂದು ಮನೆಯನ್ನು ಕಟ್ಟಿಸಿಕೊಡಲ್ಲ. ಇದು ಬರೀ “ಚುನಾವಣಾ ಗಿಮಿಕ್” ಅಷ್ಟೆ.
ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಅವರು ಅಂಜುಮಾನ್ ಸಂಸ್ಥೆಯವರಿಗೆ 5 ಲಕ್ಷ ರೂಪಾಯಿ ಹಣ ಕೊಟ್ಟು ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿಗೆ ಮತ ಹಾಕಲ್ಲ ಎಂದು ಗೊತ್ತು, ನಮಗೆ ಮತ ನೀಡದಿದ್ದರೂ ಪರವಾಗಿಲ್ಲ, ಜೆಡಿಎಸ್ ಗೆ ಹಾಕಿ ಎಂದು ಹೇಳಿದ್ದಾರೆ ಎಂದು ದೂರಿದ್ದಾರೆ.