ಇದು ಸೆಮಿಫೈನಲ್.. 2023 ರ ಫೈನಲ್ ನಲ್ಲಿ ನಾವೇ ಗೆಲ್ಲುತ್ತೇವೆ : ಸಿದ್ದರಾಮಯ್ಯ

1 min read
By Election Siddaramaiah Congress K S Eshwarappa

ಇದು ಸೆಮಿಫೈನಲ್.. 2023 ರ ಫೈನಲ್ ನಲ್ಲಿ ನಾವೇ ಗೆಲ್ಲುತ್ತೇವೆ : ಸಿದ್ದರಾಮಯ್ಯ

ಬೆಂಗಳೂರು : ಈ ಉಪಚುನಾವಣೆ ಸೆಮಿಫೈನಲ್, 2023ರ ವಿಧಾನಸಭಾ ಚುನಾವಣೆ ಫೈನಲ್, ಅದರಲ್ಲಿಯೂ ನಾವೇ ಗೆಲ್ಲುತ್ತೇವೆ ಎಂದು ಉಪಚುನಾವಣೆಯ ಫಲಿತಾಂಶದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಹಾನಗಲ್ ಕ್ಷೇತ್ರದಲ್ಲಿ ನಮ್ಮದು ಪರಿಪೂರ್ಣ ಗೆಲುವು, ಸಿಂದಗಿ ಕ್ಷೇತ್ರದಲ್ಲಿ ನಾವು ಸೋತು ಗೆದ್ದಿದ್ದೇವೆ. ನಮ್ಮ ಪಕ್ಷದ ನೀತಿ, ಕಾರ್ಯಕ್ರಮ ಮತ್ತು ಅಭ್ಯರ್ಥಿಗಳ ಮೇಲೆ ವಿಶ್ವಾಸ ಇಟ್ಟು ಮತ ನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆಡಳಿತ ವಿರೋಧಿ ಅಲೆ ಎದ್ದಿದೆ, ಮುಂದಿನ ದಿನಗಳಲ್ಲಿ ಇದು ಸುನಾಮಿ ಆಗಲಿದೆ.

ಹಾನಗಲ್ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ನಿಜವಾದ ಅಭ್ಯರ್ಥಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಗಿದ್ದರು. ಅವರ ತವರು ಜಿಲ್ಲೆಯಲ್ಲೇ ಬಿಜೆಪಿ ಸೋತಿದೆ. ನಾನು ಈ ಮಣ್ಣಿನ ಮಗ, ಇಲ್ಲಿಯೇ ಮಣ್ಣಾಗುತ್ತೇನೆ, ಅಕ್ಕಿಆಲೂರಿನ ಅಳಿಯ ಎಂದೆಲ್ಲಾ ಭಾವನಾತ್ಮಕವಾಗಿ ಮಾತನಾಡಿದರೂ ಜನ ತಿರಸ್ಕರಿಸಿದ್ದಾರೆ ಎನ್ನವುದು ಸತ್ಯ.

ಸಿಂದಗಿಯಲ್ಲಿ ಸೋತು ಗೆದ್ದಿದ್ದೇವೆ. ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಬಂದಿದೆ. ನಮ್ಮ ಪಕ್ಷದ ಅಭ್ಯರ್ಥಿ ಕಳೆದ ಬಾರಿಗಿಂತ 40 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಜೆಡಿಎಸ್ ನಿಂದ ಬಂದ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಹೊಂದಾಣಿಕೆ ಸಮಸ್ಯೆಯಿಂದಾಗಿ ಸ್ವಲ್ಪ ಹಿನ್ನಡೆಯಾಗಿದೆ.

Siddaramaiah saaksha tv

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದೆ, ಅಧಿಕಾರದ ದುರುಪಯೋಗ ಮಾಡಿದೆ. ಜಾತಿ ಕಾರ್ಡ್ ಬಳಸಿದೆ. ಮುಖ್ಯಮಂತ್ರಿಯಾದಿಯಾಗಿ ಸಂಪುಟ ಸಚಿವರು ವಾರಗಟ್ಟಲೆ ಬೀಡುಬಿಟ್ಟು ಪ್ರಚಾರ ನಡೆಸಿದ್ದಾರೆ. ಹೀಗಿದ್ದೂ ಹಾನಗಲ್ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ, ಸಿಂದಗಿಯಲ್ಲಿ ಸೋತು ಗೆದ್ದಿದ್ದೇವೆ.

ಯಡಿಯೂರಪ್ಪ ಮತ್ತು ಅವರ ಮಗ ಎರಡೂ ಕಡೆಗಳಲ್ಲಿ ಪ್ರಚಾರ ಮಾಡಿದರು. ಮುಖ್ಯಮಂತ್ರಿಗಳು, ಸಚಿವರು ಚುನಾವಣೆ ನಡೆಯುವ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದರು, ಇಷ್ಟೆಲ್ಲದರ ಹೊರತಾಗಿಯೂ ಜನ
ಬಿಜೆಪಿಗೆ ಮತ ನೀಡದೆ, ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಬದಲಾವಣೆಯ ಕಡೆ ಒಲವು ತೋರಿದ್ದಾರೆ.

ಹಾನಗಲ್ ಮತ್ತು ಸಿಂದಗಿ ಉಪಚುನಾವಣಾ ಫಲಿತಾಂಶ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ನಾನು ಹೇಳುವುದಿಲ್ಲ. ಆದರೆ ಬೊಮ್ಮಾಯಿ ಅವರ ಹನಿಮೂನ್ ಅವಧಿ ಕೊನೆಗೊಂಡಿದೆ. ಈ ಉಪಚುನಾವಣೆ ಸೆಮಿಫೈನಲ್, 2023ರ ವಿಧಾನಸಭಾ ಚುನಾವಣೆ ಫೈನಲ್, ಅದರಲ್ಲಿಯೂ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd