ಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆ ಚಾಲನೆ ನೀಡಿ ಒಂದು ವಾರ ಕಳೆದಿದ್ದು, ಯೋಜನೆಯ ಮೊದಲ ವೀಕೆಂಡ್ ಇದಾಗಿದೆ. ಈ ಹಿನ್ನೆಲೆಯಲ್ಲಿ ದೂರದೂರುಗಳಿಗೆ, ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ದಂಡು ಸಾಗುತ್ತಿದೆ. ಹೀಗಾಗಿ ಸಾರಿಗೆ ಬಸ್ ಗಳಲ್ಲಿ ಕಾಲಿಡಲು ಜಾಗ ಇಲ್ಲದಷ್ಟು ಫುಲ್ ರಶ್ ಆಗಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಮಹಿಳೆಯರು ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ ಫ್ರೀ ಟಿಕೆಟ್ ರಿಸರ್ವೇಶನ್ ಕೆಎಸ್‌ಆರ್‌ಟಿಸಿಯ ವೆಬ್‌ಸೈಟ್ ಕ್ರ್ಯಾಶ್ ಆಗಿದೆ. ಧಾರ್ಮಿಕ ಸ್ಥಳಗಳಿಗೆ ಹೆಚ್ಚಾಗಿ ಮಹಿಳೆಯರೇ ಪ್ರಯಾಣ ಮಾಡುತ್ತಿದ್ದು, 20 ರೂ. ನೀಡಿ ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಏಕಕಾಲಕ್ಕೆ ಬುಕ್ಕಿಂಗ್ ಮಾಡುತ್ತಿರುವುದರಿಂದಾಗಿ ಸರ್ವರ್ ಡೌನ್ ಆಗಲು ಕಾರಣವಾಗುತ್ತಿದೆ.
ರಾಜ್ಯದ ವಿವಿಧ ಭಾಗಗಳಿಗೆ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಒಂದು ಬಸ್‌ನಲ್ಲಿ ಸೀಟ್ ಭರ್ತಿಯಾದರೆ ಅದರಿಂದ ಇಳಿದು ಇನ್ನೊಂದು ಬಸ್ ಹತ್ತುತ್ತಿದ್ದಾರೆ. ಬೆಂಗಳೂರು ಬಸ್ ಡಿಪೋದಿಂದ ಧರ್ಮಸ್ಥಳಕ್ಕೆ 10 ನಿಮಿಷಕ್ಕೆ ಒಂದರಂತೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವ 5:30ರಿಂದಲೇ ಸಾವಿರಾರು ಪ್ರಯಾಣಿಕರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇನ್ನುಳಿದಂತೆ ಬೇರೆ ಬೇರೆ ಡಿಪೋಗಳಿಂದಲೂ ಮಹಿಳೆಯರು ಹೊರಟಿದ್ದಾರೆ.
ಮೈಸೂರು, ಮಲೇ ಮಹದೇಶ್ವರ ಹಾಗೂ ಕರಾವಳಿ ಭಾಗದಲ್ಲಿನ ಪ್ರಸಿದ್ಧ ದೇವಸ್ಥಾನಗಳತ್ತ ಮಹಿಳೆಯರು ಮುಖ ಮಾಡಿದ್ದಾರೆ. ಹೀಗಾಗಿ ವೀಕೆಂಡ್ ನಲ್ಲಿ ಎಲ್ಲ ಧಾರ್ಮಿಕ ಸ್ಥಳದ ಮಾರ್ಗವಾಗಿ ಸಂಚರಿಸುವ ಬಸ್ ಗಳು ರಶ್ ಆಗುತ್ತಿವೆ.








