2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫವಾಗಿರುವ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ಬೆನ್ನಿಗೆ ನಿಂತಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ವಿಶ್ವ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ನಂ.1 ತಂಡವಾಗಬಹುದು ಎಂದಿದ್ದಾರೆ.
ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯ ಕ್ವಾಲಿಫೈಯರ್ ಟೂರ್ನಿಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋಲಿನ ಆಘಾತ ಅನುಭವಿಸಿದ ವೆಸ್ಟ್ ಇಂಡೀಸ್, ಆ ಮೂಲಕ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿ ಭಾರೀ ನಿರಾಸೆ ಅನುಭವಿಸಿತು. ಆದರೆ ವೆಸ್ಟ್ ಇಂಡೀಸ್ ತಂಡದ ಪ್ರದರ್ಶನದ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಕ್ಲೈವ್ ಲಾಯ್ಡ್ ಸಾರಥ್ಯದಲ್ಲಿ 1975 ಹಾಗೂ 1979ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ವೆಸ್ಟ್ ಇಂಡೀಸ್, ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಪ್ರಾಬಲ್ಯ ಹೊಂದಿತ್ತು, ಆದರೀಗ ನೀರಸ ಪ್ರದರ್ಶನ ನೀಡಿದೆ.
“ನಾನು ವೆಸ್ಟ್ ಇಂಡೀಸ್ ತಂಡ ಹಾಗೂ ವೆಸ್ಟ್ ಇಂಡೀಸ್ನ ಕ್ರಿಕೆಟಿಗರನ್ನ ಪ್ರೀತಿಸುತ್ತೇನೆ. ಹೀಗಾಗಿ ವೆಸ್ಟ್ ಇಂಡೀಸ್ ವಿಶ್ವ ಕ್ರಿಕೆಟ್ನಲ್ಲಿ ನಂ.1 ತಂಡವಾಗಲಿದೆ ಎಂಬ ನಂಬಿಕೆ ಇದೆ” ಎಂದಿದ್ದಾರೆ. ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ಜೇಸನ್ ಹೋಲ್ಡರ್(45) ಹಾಗೂ ರೊಮಾರಿಯೋ ಶೆಫರ್ಡ್(36) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 43.5 ಓವರ್ಗಳಲ್ಲಿ 181 ರನ್ಗಳಿಗೆ ಆಲೌಟ್ ಆಯಿತು. ಈ ಟಾರ್ಗೆಟ್ ಚೇಸ್ ಮಾಡಿದ ಸ್ಕಾಟ್ಲೆಂಡ್ ಮ್ಯಾಥ್ಯೂ ಕ್ರಾಸ್(74*) ಹಾಗೂ ಬ್ರೆಂಡನ್ ಮೆಕ್ಮುಲೆನ್(69) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 43.3 ಓವರ್ಗಳಲ್ಲಿ 185/3 ರನ್ಗಳಿಸುವ ಮೂಲಕ 7 ವಿಕೆಟ್ಗಳ ಗೆಲುವು ಸಾಧಿಸಿತು.








