ಕೆಲವು ವರ್ಷಗಳಿಂದ ಹಲವಾರು ವೈರಸ್ ಗಳು ಎಂಟ್ರಿ ಕೊಟ್ಟು ಜನರ ಬದುಕನ್ನು ಹಿಂಡೆ ಹಿಪ್ಪೆ ಮಾಡಿವೆ. ಈ ಮಧ್ಯೆ ಕೇರಳಿಗರಿಗೆ ವೆಸ್ಟ್‌ನೈಲ್ (West Nile Virus) ಎಂಬ ವೈರಸ್ ನ ಭಯ ಶುರುವಾಗಿದೆ.
ಇತ್ತೀಚೆಗಷ್ಟೇ ಕೇರಳದಲ್ಲಿ ಹಕ್ಕಿ ಜ್ವರ ಪತ್ತೆಯಾಗಿತ್ತು. ಅದರ ಬೆನ್ನಲ್ಲಿಯೇ ಈಗ ಈ ವೈರಲ್ ಎಂಟ್ರಿಕೊಟ್ಟಿದ್ದು, ಜನರು ಭಯಭೀತರಾಗಿದ್ದಾರೆ. ಈಗಾಗಲೇ ಮಕ್ಕಳು ಸೇರಿದಂತೆ ಕನಿಷ್ಟ ಐವರಲ್ಲಿ ಸೋಂಕು ದೃಢಪಟ್ಟಿದೆ.
ಇದು ಸೊಳ್ಳೆಯಿಂದ (Mosquito) ಹರಡುವ ರೋಗವಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ರಾಜ್ಯದಾದ್ಯಂತ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿತ್ತು. ಮುಂಗಾರು ಪೂರ್ವ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುವ ಕಾರಣ ಕುರಿತು ಸೂಕ್ತ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಹೇಳಿದೆ.
ವೆಸ್ಟ್‌ನೈಲ್ ವೈರಸ್ 1937ರಲ್ಲಿ ಮೊದಲ ಬಾರಿಗೆ ಉಗಾಂಡಾದ ವೆಸ್ಟ್‌ನೈಲ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರಲ್ಲಿ ಕಾಣಿಸಿಕೊಂಡಿತು. 2019 ರಲ್ಲಿ ಆರು ವರ್ಷದ ಬಾಲಕ ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ. 2022ರಲ್ಲಿ, ತ್ರಿಶೂರ್ ಜಿಲ್ಲೆಯ 47 ವರ್ಷದ ವ್ಯಕ್ತಿಯೊಬ್ಬರು ಈ ರೋಗದಿಂದ ಸಾವನ್ನಪ್ಪಿದ್ದರು.
ಆರಂಭದಲ್ಲಿ ಈ ಸೋಂಕು ಕಾಣಿಸಿಕೊಂಡವರಲ್ಲಿ ಶೇ.80ರಷ್ಟು ಆರಂಭಿಕ ರೋಗ ಲಕ್ಷಣಗಳು ಕಂಡು ಬರುವುದಿಲ್ಲ. ಜ್ವರ, ತಲೆನೋವು, ಸುಸ್ತು, ದೇಹದ ನೋವು, ವಾಕರಿಕೆ, ವಾಂತಿ, ಚರ್ಮದ ದದ್ದುಗಳು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಲ್ಲದೆ, ಕೆಲವು ರೋಗಿಗಳಲ್ಲಿ ಕುತ್ತಿಗೆ ಬಿಗಿತ, ಮೂರ್ಖತನ, ದಿಗ್ಭ್ರಮೆ, ಕೋಮಾ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ ಮತ್ತು ಪಾರ್ಶ್ವವಾಯು ಸೇರಿದಂತೆ ತೀವ್ರವಾದ ರೋಗಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು.