ರಾಜ್ಯ ಸಚಿವ ಸ್ಥಾನದಿಂದ ವಜಾಗೊಂಡಿರುವ ಹಿರಿಯ ಶಾಸಕ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ತಮ್ಮ ವಿರುದ್ಧ ಉಂಟಾಗಿರುವ ಗೊಂದಲ ಮತ್ತು ತಪ್ಪು ಮಾಹಿತಿಗಳ ಕುರಿತು ಸ್ಪಷ್ಟನೆ ನೀಡುವ ಉದ್ದೇಶದಿಂದ ಈ ಪತ್ರವನ್ನು ಬರೆದಿರುವುದಾಗಿ ರಾಜಣ್ಣ ತಿಳಿಸಿದ್ದಾರೆ.
ಪತ್ರದಲ್ಲಿ, ತಮ್ಮ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ವ್ಯಾಖ್ಯಾನಿಸಿ ವರಿಷ್ಠರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ರಾಜಣ್ಣ ಆರೋಪಿಸಿದ್ದಾರೆ. ನನ್ನ ಮಾತಿನ ಅರ್ಥವನ್ನು ಬದಲಾಯಿಸಿ ನಿಮ್ಮ ಗಮನಕ್ಕೆ ತಂದವರ ಕಾರಣದಿಂದಲೇ ನನ್ನ ವಿರುದ್ಧ ಕ್ರಮ ಜರುಗಿದೆ. ಈ ತಪ್ಪು ಮಾಹಿತಿ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದೇ ವೇಳೆ, ತಮ್ಮ ಹೇಳಿಕೆಯ ನಿಜವಾದ ಹಿನ್ನೆಲೆ ಮತ್ತು ಉದ್ದೇಶವನ್ನು ನೇರವಾಗಿ ವಿವರಿಸಲು ಅವಕಾಶ ನೀಡುವಂತೆ ರಾಹುಲ್ ಗಾಂಧಿಯನ್ನು ರಾಜಣ್ಣ ಕೋರಿದ್ದಾರೆ. ಈ ವಿಷಯವನ್ನು ಸಮಗ್ರವಾಗಿ ಚರ್ಚಿಸಲು ನಿಮ್ಮನ್ನು ಭೇಟಿಯಾಗುವ ಅವಕಾಶ ನೀಡಿ ಎಂದು ಅವರು ಪತ್ರದಲ್ಲಿ ವಿನಂತಿಸಿದ್ದಾರೆ.
ಈ ಪತ್ರ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದ್ದು, ರಾಜಣ್ಣ ವಿರುದ್ಧ ನಡೆದ ಕ್ರಮ ಮರುಪರಿಶೀಲನೆ ಆಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಕಾಂಗ್ರೆಸ್ ಹೈಕಮಾಂಡ್ ಈ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದರತ್ತ ರಾಜ್ಯ ರಾಜಕೀಯದ ಗಮನ ಕೇಂದ್ರೀಕೃತವಾಗಿದೆ.








