ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅನಿಯಂತ್ರಿತವಾಗಿ ಹರಡುವುದಕ್ಕೂ, ಸರ್ಕಾರದ ಭ್ರಷ್ಟಾಚಾರಕ್ಕೂ ನೇರವಾದ ಸಂಪರ್ಕ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, “ರಾಜ್ಯದಲ್ಲಿ ಕೊರೊನಾ ಅನಿಯಂತ್ರಿತವಾಗಿ ಹರಡುವುದಕ್ಕೂ, ಸರ್ಕಾರದ ಭ್ರಷ್ಟಾಚಾರಕ್ಕೂ ನೇರವಾದ ಸಂಪರ್ಕ ಇದೆ. ಈ ಕಾರಣಕ್ಕಾಗಿ ನಾವು ಅಭಿಯಾನದ ಮೂಲಕ ಜನರ ಬಳಿ ನೇರವಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ” ಎಂದಿದ್ದಾರೆ.
ಎರಡನೇ ಟ್ವೀಟ್ ನಲ್ಲಿ, ಜನರ ಕಷ್ಟದ ಕಾಲದಲ್ಲಿ ವಿರೋಧಪಕ್ಷಗಳು ಸಹಕಾರ ನೀಡಬೇಕು, ಆರೋಪ ಮಾಡುವುದು ಸರಿಯೇ ಎಂದು ಮುಖ್ಯಮಂತ್ರಿಗಳು ಕೇಳ್ತಿದ್ದಾರೆ. ಇಂತಹ ಸಾವು-ನೋವಿನ ಕಷ್ಟ ಕಾಲದಲ್ಲಿ ಜನರ ಜೀವ ಉಳಿಸಬೇಕೇ ಹೊರತು ಭ್ರಷ್ಟಾಚಾರ ಮಾಡುವುದು ಸರಿಯೇ? ಎಂದು ನಾವು ಕೇಳುತ್ತಿದ್ದೇವೆ. ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ ಹೇಳಿ ಎಂದು ಬಿಎಸ್ ವೈಗೆ ಟಾಂಗ್ ನೀಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, “ನಮ್ಮಿಂದ ಸಹಕಾರ ನಿರೀಕ್ಷಿಸುವ ಬಿಜೆಪಿ ಸರ್ಕಾರ, ಕೊರೊನಾ ಕಾಲದಲ್ಲಿ ಮಧ್ಯಪ್ರದೇಶದ ನಮ್ಮ ಸರ್ಕಾರಕ್ಕೆ ಅಲ್ಲಿನ ಬಿಜೆಪಿ ಯಾಕೆ ಸಹಕಾರ ಕೊಡಲಿಲ್ಲ? ರಾಜಸ್ತಾನದ ನಮ್ಮ ಸರ್ಕಾರವನ್ನು ಉರುಳಿಸಲು ಹೊರಟದ್ದು ಯಾಕೆ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
“ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿತ್ತು ಎನ್ನುವ ಕಾರಣಕ್ಕೆ ಸಹಿಸಿಕೊಂಡು ಸುಮ್ಮನಿದ್ದೆವು. ಈಗ ಕೊರೊನಾ ಸಾವು-ನೋವುಗಳಲ್ಲಿ ಮಹಾರಾಷ್ಟ್ರ-ತಮಿಳುನಾಡುಗಳನ್ನು ಮೀರಿಸಿ ಕರ್ನಾಟಕ ನಂಬರ್ ಒನ್ ಆಗಲು ಹೊರಟಿದೆ. ಈಗಲೂ ಸುಮ್ಮನಿದ್ದರೆ ಜನದ್ರೋಹ ಆಗಲಾರದೇ.? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.