ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಇವರಿಗೆ ಸರ್ಕಾರ 5 ಸಾವಿರ ನೆರವು ನೀಡುವುದಾಗಿ ಘೋಷಿಸಿದೆ.
ಈ ಪರಿಹಾರ ಧನ ಪಡೆಯಲು ಆಟೋ ಮತ್ತು ಟ್ಯಾಕ್ಸಿ ಚಾಲಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಹ ಆಟೋ – ಟ್ಯಾಕ್ಸಿ ಚಾಲಕರ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ ಪಾವತಿ ಮಾಡಲಾಗುತ್ತದೆ.
ಮಾರ್ಚ್ 24ಕ್ಕೆ ಚಾಲ್ತಿಯಲ್ಲಿರುವ ವಾಹನ ಚಾಲನಾ ಪತ್ರ ಹೊಂದಿರುವ ಚಾಲಕರು ಪರಿಹಾರ ಧನ ಪಡೆಯಲು ಅರ್ಹರಾಗಿದ್ದು, ಚಾಲಕರು ತಮ್ಮ ಆಧಾರ್ ಸಂಖ್ಯೆ, ವಿಳಾಸ, ಡಿಎಲ್ ಸಂಖ್ಯೆ, ಬ್ಯಾಡ್ಜ್ ಸಂಖ್ಯೆ, ವಾಹನದ ಫಿಟ್ ನೆಸ್ ಸರ್ಟಿಫಿಕೇಟ್, ಚಾಲಕರ ವರ್ಗ, ವಾಹನದ ವರ್ಗ, ಬ್ಯಾಂಕ್ ಖಾತೆ ಸಂಖ್ಯೆ ಮತ್ತಿತರ ವಿವರವನ್ನು ಇಂಗ್ಲಿಷ್ ನಲ್ಲಿಯೇ ಭರ್ತಿ ಮಾಡಬೇಕು. ಚಾಲನಾ ಪರವಾನಗಿಯಲ್ಲಿರುವಂತೆಯೇ ಚಾಲಕರು ತಮ್ಮ ಹೆಸರನ್ನು ಅರ್ಜಿಯಲ್ಲಿ ನಮೂದಿಸಬೇಕು.
ಎಲ್ಲ ವಿವರ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಅರ್ಹರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಹೇಳಿದೆ.
ಹೆಚ್ಚಿನ ಮಾಹಿತಿಗೆ 080-22236698/ 9449863214 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಅರ್ಜಿಗಾಗಿ https://serviceonline.gov.in/karnataka/directApply.do?serviceId=1088 ಈ ಲಿಂಕ್ ಬಳಸಬಹುದು.