ರಾಹುಲ್ ದ್ರಾವಿಡ್ ಕೈಯಿಂದ ಬೈಸಿಕೊಂಡಿದ್ದ ಮಹೇಂದ್ರ ಸಿಂಗ್ – ಸೆಹ್ವಾಗ್ ಗೆ ಅರ್ಥವಾಗದ ಇಂಗ್ಲೀಷ್ ಪದಗಳು..!
ಜಾಹಿರಾತು ಒಂದರಲ್ಲಿ ಸಿಟ್ಟಿಗೆದ್ದು ನಾನು ಇಂದಿರ ನಗರದ ಗೂಂಡಾ ಎಂದು ಹೇಳಿಕೊಳ್ಳುತ್ತಿರುವ ರಾಹುಲ್ ದ್ರಾವಿಡ್ ಅವರ ಇನ್ನೊಂದು ಮುಖವಾಡ ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ರಾಹುಲ್ ದ್ರಾವಿಡ್ ಅಂದ್ರೆ ತಕ್ಷಣ ನೆನಪಾಗೋದು ಅವರ ತಾಳ್ಮೆ ಹಾಗೂ ಮುಗ್ಧತೆಯ ಮುಖ. ರಾಹುಲ್ ದ್ರಾವಿಡ್ ಸಿಟ್ಟಿಗೆದ್ದಿರುವುದು ತುಂಬಾನೇ ವಿರಳ. ಹೀಗಾಗಿ ರಾಹುಲ್ ದ್ರಾವಿಡ್ ಅವರ ಜಾಹಿರಾತಿನ ಅಬ್ಬರಕ್ಕೆ ಅವರ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ.
ಈ ನಡುವೆ, ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ರಾಹುಲ್ ಸಿಟ್ಟಿಗೆದ್ದಿರುವುದನ್ನು ನೆನಪು ಮಾಡಿಕೊಂಡಿದ್ದಾರೆ.
ಅದು 2006ರ ಪಾಕಿಸ್ತಾನ ಪ್ರವಾಸ. ಆಗ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಹೊಸ ಆಟಗಾರ. ಆಗ ಧೋನಿ ಒಂದು ಕೆಟ್ಟ ಹೊಡೆತಕ್ಕೆ ಔಟಾದ್ರು. ಆಗ ಕುಪಿತಗೊಂಡ ರಾಹುಲ್, ಧೋನಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡ್ರು. ನೀನು ಆಡುವ ರೀತಿಯಾ ? ನೀನು ಪಂದ್ಯವನ್ನು ಮುಗಿಸಬೇಕು ಎಂದು ರಾಹುಲ್ ಇಂಗ್ಲೀಷ್ ನಲ್ಲಿ ಬೈಯುತ್ತಿದ್ರು. ಆದ್ರೆ ರಾಹುಲ್ ದ್ರಾವಿಡ್ ಅವರ ಇಂಗ್ಲೀಷ್ ಮಾತ್ರ ನನಗೆ ಅರ್ಧದಷ್ಟು ಅರ್ಥವಾಗಿರಲಿಲ್ಲ ಎಂದು ಸೆಹ್ವಾಗ್ ದ್ರಾವಿಡ್ ಅವರ ಸಿಟ್ಟನ್ನು ಸ್ಮರಿಸಿಕೊಂಡಿದ್ದಾರೆ.
ದ್ರಾವಿಡ್ ಅವರ ಸಿಟ್ಟು ಮುಂದಿನ ಪಂದ್ಯದಲ್ಲಿ ಎಫೆಕ್ಟ್ ಆಗಿತ್ತು. ಧೋನಿ ಹೆಚ್ಚು ಶಾಟ್ಸ್ ಗಳನ್ನು ಹೊಡೆಯುತ್ತಿರಲಿಲ್ಲ. ಆಗ ನಾನು ಧೋನಿ ಬಳಿ ಬಂದು ಏನಾಗಿದೆ ಎಂದು ಕೇಳಿದೆ. ಅದಕ್ಕೆ ಧೋನಿ, ಮತ್ತೆ ರಾಹುಲ್ ಕೈಯಲ್ಲಿ ಬೈಸಿಕೊಳ್ಳುವುದು ಬೇಡ. ನಿಧಾನವಾಗಿಯೇ ಆಡುತ್ತಾ ಪಂದ್ಯವನ್ನು ,ಮುಗಿಸಿ ಹೋಗೋಣ ಎಂದು ಹೇಳಿದ್ರು.