ಬೆಂಗಳೂರು: ಮೂಡಾ ಸೇರಿದಂತೆ ರಾಜ್ಯ ಸರ್ಕಾರದ ಅವಧಿಯಲ್ಲಾದ ಹಲವು ಅಕ್ರಮಗಳನ್ನು ಖಂಡಿಸಿ ಆಗಸ್ಟ್ 3ರಿಂದ ಬೆಂಗಳೂರಿನಿಂದ ಪಾದಯಾತ್ರೆ ಆರಂಭಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ, ಜೆಡಿಎಸ್ ನಾಯಕರ ಸಭೆಯ ನಂತರ ಮಾತನಾಡಿದ ಅವರು, ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತೇವೆ. ಮೈಸೂರಿನಲ್ಲಿ ಆ.10ರಂದು ಪಾದಯಾತ್ರೆ ಸಮಾರೋಪ ಸಮಾರಂಭ ಮಾಡಲಾಗುವುದು ಎಂದು ಹೇಳಿದ್ದಾರೆ.
ಮುಡಾ ಹಗರಣ ವಿಚಾರವಾಗಿ ಪಾದಯಾತ್ರೆಯ ಸಮರ ಸಾರಿರುವ ಬಿಜೆಪಿ, ಜೆಡಿಎಸ್ ನಾಯಕರ ಸಮಾಗಮವೇ ಆಗಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮೈಸೂರು ಪಾದಯಾತ್ರೆಯ ಪೂರ್ವಭಾವಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪಾದಯಾತ್ರೆಯ ರೂಪರೇಷೆಯ ಕುರಿತು ಸಮಾಲೋಚನೆ ಮಾಡಲಾಗಿದ್ದು, ಪಾದಯಾತ್ರೆ ಹೊರಡುವ ದಿನಾಂಕವನ್ನೂ ಘೋಷಣೆ ಮಾಡಲಾಗಿದೆ.
ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಈ ಆರೋಪಗಳಿಗೆ ಸದನದಲ್ಲಿ ಉತ್ತರವನ್ನೇ ನೀಡಿಲ್ಲ. ಪರಿಶಿಷ್ಟ ಸಮುದಾಯದ ಹಣವನ್ನು ಲೂಟಿ ಮಾಡಿದ್ದಾರೆ. ಸಿಎಂ ಕುಟುಂಬ ಅಕ್ರಮವಾಗಿ ಸೈಟ್ ಪಡೆದ ಭೂಮಿ ಸರ್ಕಾರದ್ದು. ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.








