ರೆಮಲ್ ಚಂಡಮಾರುತ(Remal Cyclone)ದಿಂದಾಗಿ ನೈಋತ್ಯ ಮುಂಗಾರು ಸ್ವಲ್ಪ ವೇಗವಾಗಿ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಿಂದೆ ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನದಲ್ಲಿ ಸಾಮಾನ್ಯವಾಗಿ ಜೂನ್ 5ರಂದು ಮುಂಗಾರು ಪ್ರವೇಶವಾಗುತ್ತಿತ್ತು. ಆದರೆ, ಈ ಬಾರಿ ವಾಡಿಕೆಗಿಂತಲೂ ಮುಂಚೆಯೇ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ.
ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಒಂದೇ ಸಮಯಕ್ಕೆ ಮುಂಗಾರು ಪ್ರವೇಶಿಸಲಿದೆ. ಪಶ್ಚಿಮ ಬಂಗಾಳ ಹಾಗೂಬಾಂಗ್ಲಾದೇಶದ ಮೂಲಕ ಸಾಗಿದ ರೆಮಲ್ ಚಂಡಮಾರುತ ಮುಂಗಾರು ಹರಿವನ್ನು ಬಂಗಾಳಕೊಲ್ಲಿಗೆ ಎಳೆದಿದೆ. ಹೀಗಾಗಿಯೇ ಈಶಾನ್ಯ ರಾಜ್ಯಗಳಲ್ಲಿ ಮುಂಗಾರು 5 ದಿನ ಮುಂಚಿತವಾಗಿಯೇ ಪ್ರವೇಶ ಪಡೆಯಲಿದೆ. ಮುಂದಿನ 24 ಗಂಟೆಗಳಲ್ಲಿ ಕೇರಳಕ್ಕೆ ಹಾಗೂ ಈಶಾನ್ಯ ರಾಜ್ಯಗಳ ಕೆಲ ಪ್ರದೇಶಗಳಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಮೇ 31ಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.