ರೈತರ ಆದಾಯ ದ್ವಿಗುಣ ಎಲ್ಲಿ ಪ್ರಧಾನಿಗಳೇ : ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಬೆಲೆ ಏರಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನ ಮಾಡಿರುವ ಕುಮಾರಸ್ವಾಮಿ, 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಮೋದಿ ಹೇಳಿದ್ದರು. ಆದರೆ, 2021ರ ವೇಳೆಗೇ ರೈತರ ಕೃಷಿ ಖರ್ಚು-ವೆಚ್ಚ ದುಪ್ಪಟ್ಟಾಗಿದೆ. ರಸಗೊಬ್ಬರ ಬೆಲೆ ಏರಿದೆ. ರೈತರು ಬೋರ್ವೆಲ್ ಕೊರೆಸಲಾಗದಂಥಾ ಪರಿಸ್ಥಿತಿ ಉದ್ಭವವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯು ಪರಿಸ್ಥಿತಿಯನ್ನು ವಿಷಮಗೊಳಿಸಿದೆ. ಇನ್ನು ಆದಾಯ ದ್ವಿಗುಣ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
ಇವತ್ತಿನ ಲೆಕ್ಕಾಚಾರದ ಪ್ರಕಾರ ರೈತರು ಬೋರ್ ವೆಲ್ ಕೊರೆಸಬೇಕಿದ್ದರೆ 1-2ಲಕ್ಷ ಖರ್ಚು ಮಾಡಬೇಕು. ಪಿವಿಸಿ ಪೈಪ್ಗಳ ದರ ದುಪ್ಪಟ್ಟಾಗಿದೆ, ಮೋಟರ್ ಬೆಲೆಯಲ್ಲಿ ಜಿಗಿತವಾಗಿದೆ. ಕೃಷಿ ಪಂಪ್ ಸೆಟ್ಗಳಿಗೆ ರೈತರಾದವರೇ ಶೇ. 18ರಷ್ಟು ಜಿಎಸ್ಟಿ ಪಾವತಿಸಬೇಕಿರುವುದು ವಿಷಾದಕರ. ಇದು ಕೃಷಿಗೆ ಪೂರಕ ಸ್ಥಿತಿಯೇ ಎಂಬುದರ ಅವಲೋಕನೆಯಾಗಬೇಕಿದೆ.
ಕೃಷಿ ಪರಿಕರಗಳ ಬೆಲೆ ಏರಿಕೆ ಬಗ್ಗೆ ರಾಜ್ಯದ ಕೃಷಿ ಸಚಿವರು ನೀಡಿರುವ ಹೇಳಿಕೆ ಇಂತಿದೆ, ‘ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಹೆಚ್ಚಳಕ್ಕೆ ರೈತರು ಹೊಂದಿಕೊಳ್ಳಬೇಕು,’ಎಂದಿದ್ದಾರೆ ಅವರು. ರೈತರ ಕಷ್ಟ ನೀಗಿಸಬೇಕಾದವರು ಬೇಜವಾಬ್ದಾರಿತನ ತೋರುವುದು ಬೇಸರದ ವಿಚಾರ.
ಕೃಷಿಯಲ್ಲಿ ಆದಾಯ ಗಳಿಸುವುದು ಇರಲಿ, ಕೃಷಿ ಮಾಡಲೇ ರೈತ ಸಂಕಷ್ಟ ಅನುಭವಿಸಬೇಕಾಗಿರುವುದು ಇವತ್ತಿನ ದುರಂತ. ಇದನ್ನು ನಿವಾರಿಸಲಾಗದೇ ಇರುವುದು ರೈತರ ಆದಾಯ ದ್ವಿಗುಣ ಮಾಡುವ ಕ್ರಮವೇ ಎಂಬುದರ ಬಗ್ಗೆ ನರೇಂದ್ರ ಮೋದಿ ಉತ್ತರಿಸಬೇಕು. ಪರಿಸ್ಥಿತಿ ಹೀಗಿದ್ದು, ಸಮಾವೇಶದಲ್ಲಿ ರೈತರ ಕಲ್ಯಾಣದ ಬಗ್ಗೆ ಮೋದಿ ಅವರು ಆಡುವ ಮಾತುಗಳು ಪ್ರಾಮಾಣಿಕವೇ ಎಂದು ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.