ಬೆಂಗಳೂರು: ನ್ಯಾಯಾಂಗ ವ್ಯವಸ್ಥೆಯ ಮೇಲಿನ ಗಂಭೀರ ಪ್ರಹಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಖಂಡನೆ ವ್ಯಕ್ತಪಡಿಸಲು ಬರೋಬ್ಬರಿ 9 ಗಂಟೆಗಳ ಕಾಲಾವಕಾಶ ತೆಗೆದುಕೊಂಡಿರುವುದನ್ನು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತೀವ್ರವಾಗಿ ಟೀಕಿಸಿದ್ದಾರೆ. ವಿದೇಶಿ ನಾಯಕರ ಜನ್ಮದಿನಕ್ಕೆ ಕ್ಷಣಾರ್ಧದಲ್ಲಿ ಪ್ರತಿಕ್ರಿಯಿಸುವ ಪ್ರಧಾನಿಗೆ, ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭದ ಮೇಲಿನ ದಾಳಿಯನ್ನು ಖಂಡಿಸಲು ಇಡೀ ದಿನ ಬೇಕಾಯಿತೇ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ಮೋದಿಯವರ ವಿಳಂಬ ನೀತಿಯನ್ನು ಮತ್ತು ಅವರ ಬೆಂಬಲಿಗರ ವರ್ತನೆಯನ್ನು ಕಟುವಾಗಿ ವಿಮರ್ಶಿಸಿದ್ದಾರೆ.
ಪ್ರಧಾನಿ ಮೌನ, ಬೆಂಬಲಿಗರ ಸಂಭ್ರಮ
ಒಂದೆಡೆ ಪ್ರಧಾನಿಗಳು ತಡವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಇದೇ ಘಟನೆಯನ್ನು ಅವರದ್ದೇ ವಿಚಾರಧಾರೆಯ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ಈ ಸಂಭ್ರಮಾಚರಣೆಯ ಬಗ್ಗೆ ಪ್ರಧಾನಿಯವರು ಪ್ರತಿನಿಧಿಸುವ ಪಕ್ಷದ ನಾಯಕರು ತುಟಿ ಬಿಚ್ಚದಿರುವುದು, ಈ ಹೇಯ ಕೃತ್ಯಕ್ಕೆ ನೀಡುತ್ತಿರುವ ಪರೋಕ್ಷ ಪ್ರೋತ್ಸಾಹವಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಮೌನವೇ ಸಮ್ಮತಿಯೇ?
“ಪ್ರತಿಯೊಬ್ಬ ಭಾರತೀಯನೂ ಕೆರಳಿದ್ದಾನೆ ಎಂಬುದು ಪ್ರಧಾನಿಯವರ ಮಾತು. ಆದರೆ, ಆ ಪ್ರತಿಯೊಬ್ಬರಲ್ಲಿ ದೇಶದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹಸಚಿವರು, ದೇಶದ ಆಡಳಿತ ನಡೆಸುವ ಕೇಂದ್ರ ಸಚಿವರು, ಮತ್ತು ಅವರದ್ದೇ ಆದ ಬಿಜೆಪಿ ಪಕ್ಷದ ಕೋಟ್ಯಂತರ ಕಾರ್ಯಕರ್ತರು ಸೇರಿಲ್ಲವೇ? ಅವರೆಲ್ಲರ ದೀರ್ಘ ಮೌನ, ಯಾರಿಗೆ ನೀಡುತ್ತಿರುವ ಸಮ್ಮತಿ?” ಎಂದು ಅವರು ಗುಡುಗಿದ್ದಾರೆ.
ಪ್ರಜಾಪ್ರಭುತ್ವದ ಮೇಲಿನ ವ್ಯವಸ್ಥಿತ ದಾಳಿ
ಇದು ಕೇವಲ ವ್ಯಕ್ತಿಯೊಬ್ಬರ ಮೇಲಿನ ದಾಳಿಯಲ್ಲ, ಬದಲಾಗಿ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ವ್ಯವಸ್ಥಿತ ದಾಳಿ ಎಂದು ರೆಡ್ಡಿ ಬಣ್ಣಿಸಿದ್ದಾರೆ. “ಮತ ಕಳ್ಳತನದಂತಹ ಆರೋಪಗಳಿಗೆ ಬೀದಿಗಿಳಿದು ಹೋರಾಡುವ ಬಿಜೆಪಿ, ಸಂವಿಧಾನದ ಘನತೆಯನ್ನೇ ಪ್ರಶ್ನಿಸುವಾಗ ಕುಂಭಕರ್ಣ ನಿದ್ರೆಗೆ ಜಾರಿರುವುದರ ಹಿಂದಿನ ಮರ್ಮವೇನು? ನ್ಯಾಯಾಲಯದ ಪಾವಿತ್ರ್ಯತೆಗಿಂತ ರಾಜಕೀಯ ಲಾಭವೇ ನಿಮಗೆ ಮುಖ್ಯವಾಯಿತೇ?” ಎಂದು ಕಿಡಿಕಾರಿದ್ದಾರೆ.
ನಿಜವಾದ ಆಕ್ರೋಶ ಯಾರ ವಿರುದ್ಧ ಇರಬೇಕು?
ಕೊನೆಯಲ್ಲಿ ಪ್ರಧಾನಿಯವರಿಗೆ ನೇರ ಸವಾಲು ಹಾಕಿರುವ ರಾಮಲಿಂಗಾರೆಡ್ಡಿ, “ಪ್ರಧಾನಿಯವರೇ, ನಿಮ್ಮ ನಿಜವಾದ ಆಕ್ರೋಶ ಇರಬೇಕಾಗಿದ್ದು ಈ ದಾಳಿಯ ಮೇಲಲ್ಲ; ಬದಲಾಗಿ, ಇಂತಹ ದಾಳಿಗಳನ್ನು ಮಾಡಲು ಪ್ರೇರೇಪಿಸುವ, ಸಂಭ್ರಮಿಸುವ ಮತ್ತು ಪೋಷಿಸುವ ನಿಮ್ಮದೇ ವಿಚಾರಧಾರೆಯ ವಿರುದ್ಧ. ಇಲ್ಲವಾದರೆ, ನಿಮ್ಮ 9 ಗಂಟೆಗಳ ತಡವಾದ ಖಂಡನೆ, ಕೇವಲ ಒಂದು ರಾಜಕೀಯ ನಾಟಕವಾಗಿ ಇತಿಹಾಸದಲ್ಲಿ ಉಳಿಯುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.








