ಮುಂಬೈ: ದೇಶದ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮಹಾರಾಷ್ಟ್ರ ಕೂಡ ಇದಕ್ಕೆ ಹೊರತಲ್ಲ. ಮಳೆಯಿಂದಾಗಿ ಮುಂಬೈ, ಪುಣೆ ಸೇರಿದಂತೆ ನಗರದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವ್ಯಾಪಕ ಮಳೆಗೆ ಪುಣೆಯಲ್ಲಿ 6 ಜನ ಸಾವನ್ನಪ್ಪಿದ್ದಾರೆ.
ಮಳೆಯಿಂದಾಗಿ ಹಲವೆಡೆ ಸಾಕಷ್ಟು ಅವಾಂತರಗಳು ನಡೆದಿವೆ. ವಿದ್ಯುತ್ ಅವಘಡದಿಂದ ಮೂವರು ಸಾವನ್ನಪ್ಪಿದ್ದಾರೆ. ಥಾಣೆಯ ಬಾರ್ವಿ ಅಣೆಕಟ್ಟೆಗೆ ಬಿದ್ದ ಪರಿಣಾಮ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ.
ಇಂದು ಕೂಡ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುವ ಮುನ್ಸೂಚೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂಬೈ ಮತ್ತು ಪಾಲ್ಘರ್‌ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಬೈನ ಸಾಂತಾಕ್ರೂಜ್ ನಲ್ಲಿರುವ ವೀಕ್ಷಣಾಲಯವು ಈ ತಿಂಗಳಿನಲ್ಲಿ ಇಲ್ಲಿಯವರೆಗೆ 1,500 ಮಿಮೀ ಮಳೆಯನ್ನು ದಾಖಲಿಸಿದೆ. ಈ ಮೂಲಕ ಮುಂಬೈ ನಗರದ ಇತಿಹಾಸದಲ್ಲಿಯೇ 2ನೇ ಬಾರಿಗೆ ಅತಿ ಹೆಚ್ಚು ಮಳೆಯಾದಂತಾಗಿದೆ. ಕಳೆದ ಜುಲೈನಲ್ಲಿ ನಗರದಲ್ಲಿ 1,771 ಮಿಮೀ ನಷ್ಟು ಮಳೆಯಾಗಿತ್ತು.
ವ್ಯಾಪಕ ಮಳೆಯಿಂದಾಗಿ ಕುಂಡಲಿಕಾ ಮತ್ತು ಅಂಬಾ ಸೇರಿದಂತೆ ರಾಜ್ಯದ ನಾಲ್ಕು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಹೀಗಾಗಿ ನಗರದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜುಹು ಕಡಲತೀರದ ಉದ್ದಕ್ಕೂ ಅಲೆಗಳ ಅಬ್ಬರ ಜೋರಾಗಿದೆ. ಕರಾವಳಿಯಿಂದ ದೂರವಿರುವಂತೆ ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದೆ.








