ಬೆಳಗಾವಿ: ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಅನಾಹುತಗಳು ನಡೆಯುತ್ತಿವೆ. ಹಲವೆಡೆ ಜನ- ಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದಾಗಿ ಮನೆ ಬಿದ್ದ ಪರಿಣಾಮ 2 ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ(Belagavi) ಜಿಲ್ಲೆಯ ಅಥಣಿ ಪಟ್ಟಣದ ಅಗಸಿಯಲ್ಲಿ ಮಳೆಯಿಂದಾಗಿ ಮನೆಗೋಡೆ ಕುಸಿದ ಪರಿಣಾಮ 23 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಕಾಶಿನಾಥ್ ಸುತಾರ್(23) ಸಾವನ್ನಪ್ಪಿದ ದುರ್ದೈವಿ. ನಿರಂತರ ಮಳೆಗೆ ಮನೆ ಗೋಡೆ ನೆನೆದು ಈ ಅವಘಡ ಸಂಭವಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಮನೆಗೋಡೆ ಕುಸಿದು ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹಿರಿಯಮ್ಮ(60) ಸಾವನ್ನಪ್ಪಿದ್ದಾರೆ.