ತಂದೆ ಮಾಡಿದ್ದ ಸಾಲಕ್ಕೆ ಹೆಂಡತಿ ಮಕ್ಕಳ ಜೀತ – ಮಕ್ಕಳ ರಕ್ಷಣೆ..
ತಂದೆ ಮಾಡಿದ್ದ ಸಾಲಕ್ಕೆ ಹೆಂಡತಿ ಮಕ್ಕಳನ್ನ ಜೀತವಿರಿಸಿಕೊಂಡಿದ್ದ ಅಮಾನುಷ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಕೂಲಿ ಕಾರ್ಮಿಕನಾಗಿದ್ದ ನಾಗರಾಜ ಎನ್ನುವ ವ್ಯಕ್ತಿ ಬಳ್ಳಾರಿಯ ರಾಜ್ಯೋತ್ಸವ ನಗರದ ಸಫುರಾ ಎನ್ನುವವರ ಬಳಿ 3೦ ಸಾವಿರ ರೂಪಾಯಿ ಸಾಲ ಪಡೆದಿದ್ದ. ಸಾಲ ತೀರಿಸುವ ಮುನ್ನವೇ ನಾಗರಾಜ ಅನಾರೋಗ್ಯ ದಿಂದ ಸಾವನ್ನಪ್ಪಿದ್ದನು. ಆದ್ರೆ ನಾಗರಾಜಗ ಮಾಡಿದ್ದ ಸಾಲಕ್ಕೆ ಮುನ್ನಿ ಮತ್ತು ಬೇಬಿ ಎಂಬುವವರು ಸಪುರಾ ಎನ್ನುವ ವ್ಯಕ್ತಿಗೆ ಹಣ ಕೊಟ್ಟು ಸಾಲ ತೀರಿಸಿದ್ರು. ಸಾಲ ತೀರಿಸಿದ ಬಳಿಕ ಮುನ್ನಿ ಮತ್ತು ಬೀಬಿ ನಾಗರಾಜನ ನಾಲ್ಕು ಮಕ್ಕಳ ಪೈಕಿ ಮೂವರನ್ನು ಸಾಲ ತೀರುವವರೆಗೂ ತಮ್ಮ ಬಳಿ ಜೀತಕ್ಕೀರಿಸಿ ಕೊಂಡಿದ್ರು.
ಜೀತಕ್ಕಿಟ್ಟುಕೊಂಡಿದ್ದಷ್ಟೇ ಅಲ್ಲದೇ ಅಮಾನುಷವಾಗಿ ವರ್ತಿಸಿ ಮಕ್ಕಳ ಮೇಲೆ ಆಗಾಗ ಹಲ್ಲೆ ಮಾಡಿದ್ದಾರೆ. ಮಕ್ಕಳನ್ನ ಬೇರೆ ಮನೆಗಳಿಗೆ ಕೆಲಸಕ್ಕೆ ಕಳುಹಿಸಿ ಹಣ ವಸೂಲಿ ಮಾಡಿದ್ದಾರೆ. ಮಕ್ಕಳು ಹಾಗೂ ನಾಗರಾಜ ಪತ್ನಿ ಸುನೀತಾ ಗಂಡ ಮಾಡಿದ ಸಾಲ ತೀರಿಸಲು ಕಳೆದ 10 ತಿಂಗಳಿನಿಂದ ಕಂಡ ಕಂಡವರ ಮನೆಕೆಲಸ ಮಾಡಿ ಹಣ ತಂದು ಕೊಟ್ಟಿದ್ದಾರೆ ಇದನ್ನು ನೋಡಲಾಗದ ಸ್ಥಳೀಯರು ಕಳೆದ ರಾತ್ರಿ ಬಳ್ಳಾರಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಂಜುಳಾ ನೇತೃತ್ವದಲ್ಲಿ ಮುನ್ನಿ ಮನೆ ಮೇಲೆ ಪೊಲೀಸರ ಜೊತೆ ದಾಳಿ ನಡೆಸಿ ಮಕ್ಕಳನ್ನ ಬಂಧಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಗೆ ದಾಳಿ ನಡೆಸುತ್ತಿದ್ದಂತೆ ಮುನ್ನಿ ಮತ್ತು ಬೀಬಿ ಮನೆಯಿಂದ ಪರಾರಿಯಾಗಿದ್ದಾರೆ. ಗಣೇಶ, ಅಂಬು, ಲತಾ, ಚಿನ್ನಾ ಎನ್ನುವ ಮಕ್ಕಳನ್ನಯ ಬ್ರೂಸ್ ಪೇಟರ ಪೊಲೀಸರು ಬಂಧಮುಕ್ತಗೊಳಿಸಿದ್ದಾರೆ. ಪೊಲೀಸರು ಮಕ್ಕಳ ಬಳಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








