ನವದೆಹಲಿ: ಆಸ್ತಿಯನ್ನು ಮಾರಾಟ ಮಾಡುವುದು ಬೇಡ ಅಂದಿದ್ದಕ್ಕೆ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಆಗ್ರಾದ ಶಂಭು ನಗರದಲ್ಲಿ ಈ ಘಟನೆ ನಡೆದಿದೆ. ರಮಾ ದೇವಿ ಎಂಬ ಮಹಿಳೆಯನ್ನು ಆಕೆಯ ಪತಿ ಮತ್ತು ಮಗ ಕೊಲೆ ಮಾಡಿದ್ದಾರೆ. ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೇವಲ 18 ಸೆಕೆಂಡುಗಳಲ್ಲಿ 11 ಬಾರಿ ಹೆಂಡತಿಯ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ. ಆದರೆ, ಸ್ಥಳೀಯರು ಮಹಿಳೆಯನ್ನು ಬಿಡಿಸದೆ ನೋಡುತ್ತ ನಿಂತಿದ್ದಾರೆ.
ಆರೋಪಿ ಪತಿ ದಧಿಚ್ ಇತ್ತೀಚೆಗೆ ತಮ್ಮ ಕುಟುಂಬದ ಮನೆಯನ್ನು ಮಾರಾಟ ಮಾಡುವಂತೆ ರಮಾ ದೇವಿ ಮೇಲೆ ಒತ್ತಡ ಹೇರುತ್ತಿದ್ದ. ಇದಕ್ಕೆ ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಜಗಳ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆ ಮಾಡಿ ಪತಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.