ಪ್ರಸಕ್ತ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಲಖನೌ ಸೂಪರ್ ಜೈಂಟ್ಸ್ ತಂಡ ಇಂದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಏಕನಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಕಳೆದ ಪಂದ್ಯದಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಹೋರಾಡಿದರೆ ಲಖನೌ ತಂಡ ಗೆಲುವಿನ ಅಭಿಯಾನ ಮುಂದುವರೆಸಲು ಯೋಜನೆ ರೂಪಿಸಿದೆ. ಮೊನ್ನೆ ಗುಜರಾತ್ ಟೈಟಾನ್ಸ್ ರಾಜಸ್ಥಾನ ವಿರುದ್ಧ 3 ವಿಕೆಟ್ಗಳಿಂದ ಸೋಲು ಕಂಡಿತ್ತು. ಇನ್ನು ಲಖನೌ ತಂಡ ಕಳೆದ ಬಾರಿಯ ರನ್ನರ್ಅಪ್ ರಾಜಸ್ಥಾನ ರಾಯಲ್ಸ್ ವಿರುದ್ಧ 10 ರನ್ಗಳಿಂದ ಗೆದ್ದು ಅಂಕಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೇರಿತ್ತು.
ಎರಡೂ ತಂಡಗಳು ಈ ಬಾರಿಯ ಟೂರ್ನಿಯಲ್ಲಿ ತಲಾ 2 ಪಂದ್ಯಗಳನ್ನು ಸೋತು ಅಸ್ಥಿರತೆ ಹೊಂದಿವೆ. ಕಡಿಮೆ ಪಂದ್ಯಗಳನ್ನಾಡಿರುವ ಹಾಲಿ ಚಾಂಪಿಯನ್ ಟೈಟಾನ್ಸ್ ಮೊತ್ತವನ್ನು ರಕ್ಷಿಸಿಕೊಳ್ಳಲು ಆಗುತ್ತಿಲ್ಲ. ಗುಜರಾತ್ ತಂಡದ ವೇಗಿ ಮೊಹ್ಮದ್ ಶಮಿ ಪವರ್ಪ್ಲೇನಲ್ಲಿ ನಿರಂತರ ವಿಕೆಟ್ ಪಡೆಯುವ ಬೌಲರ್ ಆಗಿದ್ದಾರೆ. ಅಲ್ಜಾರಿ ಜೋಸೆಫ್ ಮತ್ತು ಜೋಶ್ ಲಿಟ್ಲ್ ಅವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಕೊಟ್ಟಿಲ್ಲ. ಮತ್ತೋರ್ವ ವೇಗಿ ಮೋಹಿತ್ ಶರ್ಮಾ ಎರಡು ಪಂದ್ಯಗಳಿಂದ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ.
ಮಿಸ್ಟ್ರಿ ಸ್ಪಿನ್ನರ್ ರಶೀದ್ ಖಾನ್ ಸ್ಪಿನ್ ವಿಭಾಗವನ್ನು ಮುನ್ನಡೆಸುತ್ತಿದ್ದು ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್ ಅವರಿಂದ ಸರಿಯಾಗಿ ಚಚ್ಚಿಸಿಕೊಂಡಿದ್ದರು. ಗುಜರಾತ್ ತಂಡ 18 ವರ್ಷದ ಅ್ಘನ್ ಸ್ಪಿನ್ನರ್ ನೂರ್ ಅಹ್ಮದ್ ಅವರನ್ನು ಬಳಸಿಕೊಳ್ಳಬಹುದಾಗಿದೆ. ಗುಜರಾತ್ ತಂಡದಲ್ಲಿ ಶುಭ್ಮನ್ ಗಿಲ್, ಡೇವಿಡ್ ಮಿಲ್ಲರ್ , ಸಾಯಿ ಸುದರ್ಶನ್ರಂತಹ ಬ್ಯಾಟರ್ಗಳಿದ್ದು ತಂಡ ಬಲಿಷ್ಠವಾಗಿ ಕಾಣುತ್ತದೆ. ಆದರೆ ಲಖನೌ ತಂಡದ ಕೈಲೆ ಮೇಯರ್ಸ್ , ನಿಕೊಲೊಸ್ ಪೂರಾನ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಅವರೊಂದಿಗೆ ಹೋಲಿಸಲು ಆಗದು.
ಮೇಯರ್ಸ್ ಒಳ್ಳೆಯ ಫಾರ್ಮ್ನಲ್ಲಿದ್ದಾರೆ. ಪೂರಾನ್ ಮತ್ತು ಸ್ಟೋಯ್ನಿಸ್ ಮಧ್ಯಮ ಕ್ರಮಾಂಕದಲ್ಲಿ ಮ್ಯಾಚ್ ಫಿನಿಶರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾಯಕ ರಾಹುಲ್ ಅವರ ಫಾರ್ಮ್ ಚಿಂತೆಗೀಡು ಮಾಡಿದ್ದು 114.79 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ದೀಪಕ್ ಹೂಡಾ ಇನ್ನಷ್ಟೆ ಲಯಕ್ಕೆ ಮರಳಬೇಕಿದೆ. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ಅಮಿತ್ ಮಿಶ್ರಾ ಅಮೋಘ ಬೌಲಿಂಗ್ ದಾಳಿ ಮಾಡುತ್ತಿದ್ದಾರೆ. ಆಲ್ರೌಂಡರ್ ಕೃಣಾಲ್ ಪಾಂಡ್ಯ ಪಂದ್ಯ ಗೆಲ್ಲುವ ಪ್ರದರ್ಶನ ನೀಡುತ್ತಿದ್ದಾರೆ. ವೇಗಿಗಳಾದ ಮಾರ್ಕ್ ವುಡ್, ಆವೇಶ್ ಖಾನ್ ಮತ್ತು ಯಧುವೀರ್ ಸಿಂಗ್ ಚರಕ್ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಮೊದಲ ಪಂದ್ಯ ಆಡಿದ ನವೀನ್ ಉಲ್ ಹಕ್ ರಾಜಸ್ಥಾನ ರಾಯಲ್ಸ್ ವಿರುದ್ಧ ವಿಕೆಟ್ ಪಡೆಯದಿದ್ದರೂ ಕಡಿಮೆ ರನ್ ನೀಡಿ ಗಮನ ಸೆಳೆದಿದ್ದರು.