ಮುಂಬಯಿ: ಒಂದು ಕಾಲದಲ್ಲಿ ಇಡೀ ಭಾರತೀಯ ಚಿತ್ರರಂಗವನ್ನೇ ಆಳಿದ್ದ ನಟಿ ಮಾಧುರಿ ದೀಕ್ಷಿತ್ ಸದ್ಯ ರಾಜಕೀಯ ಅಂಗಳದಲ್ಲಿಯೂ ಸದ್ದು ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿಂದೆಯೂ ಮಾಧುರಿ ದೀಕ್ಷಿತ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೂಡ ಬಲವಾಗಿ ಹಬ್ಬಿದ್ದವು. ಆದರೆ, ಅವು ಸುಳ್ಳಾಗಿದ್ದವು. ಈಗ ಮತ್ತೆ ಅವರ ಹೆಸರು ಮುನ್ನೆಲೆಗೆ ಬಂದಿದ್ದು, ಬಿಜೆಪಿ ನಾಯಕರು ಅವರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಮಾಧುರಿ ದೀಕ್ಷಿತ್ಗೆ ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆ ಟಿಕೆಟ್ ನೀಡಲಿದೆ ಎನ್ನಲಾಗುತ್ತಿದೆ.
ಪುಣೆಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಮುಗಿದಿದೆ ಎಂಬ ವಿಷಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅವರು ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಮಾಧುರಿ ಹಾಗೂ ಅವರ ಪತಿ ಅಮಿತ್ ಶಾ ಅವರನ್ನು ಕೂಡ ಆ ವೇಳೆ ಭೇಟಿ ಮಾಡಿದ್ದರು. ಆದರೆ, ಆ ಸಂದರ್ಭದಲ್ಲಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಈ ಬಾರಿ ಅವರ ಸ್ಪರ್ಧೆ ಖಚಿತ ಎನ್ನಲಾಗುತ್ತಿದೆ.