ಪಾಟ್ನ: ಹಿರಿಯ ನಾಯಕ ನಿತೀಶ್ ಕುಮಾರ್ ಅವರು ಮತ್ತೊಮ್ಮೆ ಬಿಹಾರ ಸಿಎಂ ಆಗಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಯ ಬೆಂಬಲದೊಂದಿಗೆ ಜ. 28ರಂದು ಒಂಬತ್ತನೇ ಬಾರಿಗೆ ಮತ್ತೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೂತನ ಸರ್ಕಾರದಲ್ಲಿ ಬಿಜೆಪಿ 2 ಡಿಸಿಎಂ ಸ್ಥಾನ ಪಡೆಯಲಿವೆ ಎಂದು ತಿಳಿದು ಬಂದಿದೆ. ಸದ್ಯ ನಿತೀಶ್ ಕುಮಾರ್ ಕಾಂಗ್ರೆಸ್-ಆರ್‌ಜೆಡಿ ಜೊತೆಗೆ ಇರುವ ಮೈತ್ರಿಕೂಟಕ್ಕೆ ವಿದಾಯ ಹೇಳಿ, ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎನ್ನಲಾಗಿದ್ದು, ಈಗ ಬಿಜೆಪಿ-ಜೆಡಿಯು ಸರ್ಕಾರದ ಸಿಎಂ ಆಗಲಿದ್ದಾರೆ ಎಂದು ವರದಿಯಾಗಿದೆ.
ನಿತೀಶ್ ಕುಮಾರ್ ಶನಿವಾರ ಬೆಳಿಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎನ್ನಲಾಗಿದೆ. ಬಿಹಾರದಲ್ಲಿ ಮುಂದಿನ ವರ್ಷ ಮತದಾನ ನಡೆಯಲಿದೆ. ಹೀಗಾಗಿ ಎರಡೂ ಪಕ್ಷಕ್ಕೆ ಲೋಕಸಭೆ ಚುನಾವಣೆ ಮುಖ್ಯವಾಗಿದೆ. ಬಿಜೆಪಿ ಮತ್ತು ನಿತೀಶ್ ಅವರ ಜನತಾ ದಳ (ಯುನೈಟೆಡ್) ಎರಡೂ ಪಕ್ಷಗಳು ತಮ್ಮ ಸಂಸದರು ಮತ್ತು ಶಾಸಕರನ್ನು ಕರೆಯಿಸಿ ಚರ್ಚೆಗೆ ಮುಂದಾಗಿವೆ. ನಿತೀಶ್ ಕುಮಾರ್ ಆರಂಭದಲ್ಲಿ ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ತಿರಸ್ಕರಿಸಿದ್ದರು. ನಂತರ ಇಂಡಿಯಾ ಮೈತ್ರಿಕೂಟದಿಂದ ಹಿಂದೆ ಸರಿದಿದ್ದರು.