ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬೀಸುತ್ತಿದ್ದ ನಾಯಕತ್ವ ಬದಲಾವಣೆಯ ಬಿರುಗಾಳಿ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಭವನದವರೆಗೂ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಶೀತಲ ಸಮರ ತಾರಕಕ್ಕೇರಿರುವ ಹೊತ್ತಿನಲ್ಲೇ ದೆಹಲಿಯಲ್ಲಿ ನಡೆದ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕ ಮಾತುಕತೆಗೆ ಅವಕಾಶ ಸಿಗದಿರುವುದು ಮತ್ತು ಡಿಕೆಶಿ ಪಾಳಯದಲ್ಲಿ ಕೇಳಿಬರುತ್ತಿರುವ ಸಂಕ್ರಾಂತಿ ಕ್ರಾಂತಿಯ ಮಾತುಗಳು ಕುತೂಹಲದ ಕೇಂದ್ರಬಿಂದುವಾಗಿವೆ.
ರಾಹುಲ್ ಮೌನ ಸಿದ್ದರಾಮಯ್ಯಗೆ ಮುಜುಗರವೋ ಅಥವಾ ತಂತ್ರವೋ
ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ವಿಚಾರ ಜೋರಾಗಿರುವಾಗಲೇ ಸಿಎಂ ಸಿದ್ದರಾಮಯ್ಯ ದೆಹಲಿಗೆ ದೌಡಾಯಿಸಿದ್ದರು. ಆದರೆ ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಅವರೊಂದಿಗೆ ಆಪ್ತವಾಗಿ ಮಾತನಾಡುವ ಅಥವಾ ಪ್ರತ್ಯೇಕ ಭೇಟಿಯ ಭಾಗ್ಯ ಸಿಗಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿದ್ದ ಸಿಡಬ್ಲ್ಯೂಸಿ ಸಭೆಯಲ್ಲಿ ಸಿದ್ದರಾಮಯ್ಯ ಹಾಜರಿದ್ದರಾದರೂ ರಾಹುಲ್ ಗಾಂಧಿ ರಾಜ್ಯ ನಾಯಕತ್ವದ ಬಗ್ಗೆ ಚಕಾರ ಎತ್ತಿಲ್ಲ. ಬದಲಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಬಳಿ ಸಿದ್ದರಾಮಯ್ಯ ರಾಜ್ಯದ ವಿದ್ಯಮಾನಗಳನ್ನು ವಿವರಿಸಿ ಗೊಂದಲ ನಿವಾರಣೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರ ಜೊತೆ ಮಾತನಾಡದೇ ಇರುವುದು ಹೈಕಮಾಂಡ್‌ನ ಅಂತರ ಕಾಯ್ದುಕೊಳ್ಳುವ ತಂತ್ರವೇ ಎಂಬ ಪ್ರಶ್ನೆ ಮೂಡಿದೆ.
ಸಿದ್ದು ಮೇಲುಗೈ ಮತ್ತು ಜಾಲಿ ಮೂಡ್
ಸಿಡಬ್ಲ್ಯೂಸಿ ಸಭೆಯಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ಅಥವಾ ಸಿಎಂ ಕುರ್ಚಿ ಹಂಚಿಕೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸಭೆಯು ಪ್ರಮುಖವಾಗಿ ಮತ ಯಂತ್ರಗಳ ತಿರುಚುವಿಕೆ ಆರೋಪ ಮತ್ತು ಸಂಸತ್ತಿನ ಮಸೂದೆಗಳ ಮೇಲಿನ ಹೋರಾಟದ ಬಗ್ಗೆ ಸೀಮಿತವಾಗಿತ್ತು. ತನ್ನ ಕುರ್ಚಿಯ ಬಗ್ಗೆ ಹೈಕಮಾಂಡ್ ಸಭೆಯಲ್ಲಿ ಚರ್ಚೆಯಾಗದೇ ಇರುವುದು ಸಿದ್ದರಾಮಯ್ಯನವರಿಗೆ ದೊಡ್ಡ ರಿಲೀಫ್ ನೀಡಿದೆ. ನಾನೇ ಐದು ವರ್ಷ ಸಿಎಂ ಎಂದು ಪಟ್ಟು ಹಿಡಿದಿದ್ದ ಸಿದ್ದರಾಮಯ್ಯನವರಿಗೆ ಈ ಸಭೆಯ ಮೌನ ಪರೋಕ್ಷವಾಗಿ ಬಲ ನೀಡಿದಂತಿದ್ದು ಅವರು ದೆಹಲಿಯಲ್ಲಿ ಜಾಲಿ ಮೂಡ್ ನಲ್ಲಿ ಕಂಡುಬಂದರು. ಈ ಮೂಲಕ ಸದ್ಯಕ್ಕೆ ಕುರ್ಚಿ ಕಂಟಕವಿಲ್ಲ ಎಂಬ ಸಂದೇಶವನ್ನು ತಮ್ಮ ಆಪ್ತ ವಲಯಕ್ಕೆ ರವಾನಿಸಿದ್ದಾರೆ.
ದೆಹಲಿ ಯಾತ್ರೆ ಮತ್ತು ಡಿಕೆಶಿ ಪಾಳಯದ ನಿರಾಸೆ
ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ದೆಹಲಿ ಯಾತ್ರೆ ನಿರೀಕ್ಷಿತ ಫಲ ನೀಡಿದಂತಿಲ್ಲ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕನಕಪುರದ ಬಂಡೆಗೆ ಹೈಕಮಾಂಡ್ ಅಂಗಳದಲ್ಲಿ ಸ್ಪಷ್ಟ ಭರವಸೆ ಸಿಕ್ಕಿಲ್ಲ. ರಾಹುಲ್ ಗಾಂಧಿ ಭೇಟಿಗೆ ಡಿಕೆಶಿ ಪ್ರಯತ್ನಿಸಿದರೂ ಅವಕಾಶ ಸಿಗದೇ ಇರುವುದು ಅವರ ಪಾಳಯದಲ್ಲಿ ನಿರಾಸೆ ಮೂಡಿಸಿದೆ. ವರುಣಾಧಿಪತಿ ಸಿದ್ದರಾಮಯ್ಯನವರ ರಾಜಕೀಯ ತಂತ್ರದ ಮುಂದೆ ಕನಕಾಧಿಪತಿ ಡಿಕೆಶಿ ಅವರ ಪ್ಲಾನ್ ಇಂದ್ರಪ್ರಸ್ಥದಲ್ಲಿ ವರ್ಕ್ ಔಟ್ ಆಗುತ್ತಿಲ್ಲವೇ ಎಂಬ ಅನುಮಾನ ಹುಟ್ಟುಹಾಕಿದೆ.
ಸಂಕ್ರಾಂತಿಗೆ ಕ್ರಾಂತಿ ಎನ್ನುತ್ತಿರುವ ಡಿಕೆಶಿ ಟೀಂ
ವರ್ಷಾಂತ್ಯದಲ್ಲಿ ದೆಹಲಿ ಮಟ್ಟದಲ್ಲಿ ಆದ ಹಿನ್ನಡೆಯ ನಡುವೆಯೂ ಡಿಕೆಶಿ ಆಪ್ತ ವಲಯದಲ್ಲಿ ಹೊಸದೊಂದು ಗುಸುಗುಸು ಆರಂಭವಾಗಿದೆ. ಸಂಕ್ರಾಂತಿ ಹಬ್ಬದ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಅಥವಾ ಕ್ರಾಂತಿ ಆಗಲಿದೆ ಎಂದು ಡಿಕೆಶಿ ಟೀಂ ಹೇಳಿಕೊಳ್ಳುತ್ತಿದೆ. ಹೈಕಮಾಂಡ್ ಈಗ ಮೌನವಾಗಿದ್ದರೂ ಉತ್ತರಾಯಣ ಪುಣ್ಯಕಾಲದಲ್ಲಿ ಸಿಹಿ ಸುದ್ದಿ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಡಿಕೆಶಿ ಬಣವಿದೆ.
ಅವರೆಬೇಳೆ ಮೇಳದಲ್ಲಿ ಡಿಕೆಶಿಗೆ ಇಕ್ಕಟ್ಟಿನ ಪ್ರಶ್ನೆ
ರಾಜಕೀಯ ಪವರ್ ಫೈಟ್ ನಡುವೆಯೇ ಬೆಂಗಳೂರಿನ ಅವರೆಬೇಳೆ ಮೇಳಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರಿಗೆ ಮಹಿಳೆಯೊಬ್ಬರು ನೇರವಾಗಿಯೇ ಇಕ್ಕಟ್ಟಿನ ಪ್ರಶ್ನೆ ಕೇಳಿದ್ದಾರೆ. ಡಿಕೆ ಸಾರ್ ಯಾವಾಗ ಸಿಎಂ ಆಗ್ತೀರಿ ಎಂದು ಮಹಿಳೆ ಕೇಳಿದ ಪ್ರಶ್ನೆಗೆ ಡಿಕೆಶಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಮುಗುಳ್ನಕ್ಕು ಅಲ್ಲಿಂದ ನಿರ್ಗಮಿಸಿದರು. ಜನರ ಮನಸ್ಸಿನಲ್ಲಿಯೂ ಅಧಿಕಾರ ಹಂಚಿಕೆಯ ಪ್ರಶ್ನೆ ಕೊರೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ದೆಹಲಿಯಲ್ಲಿ ಹೈಕಮಾಂಡ್ ಮೌನ ಮತ್ತು ರಾಜ್ಯದಲ್ಲಿ ನಾಯಕರ ಜಟಾಪಟಿ ನೋಡಿದರೆ ಕಾಂಗ್ರೆಸ್ ಒಳಮನೆಯಲ್ಲಿ ಯುದ್ಧ ವಿರಾಮವಿಲ್ಲ ಎಂಬುದು ಸ್ಪಷ್ಟ. ಸಿದ್ದರಾಮಯ್ಯ ಅವರ ಸದ್ಯದ ಮೇಲುಗೈ ಶಾಶ್ವತವೋ ಅಥವಾ ಸಂಕ್ರಾಂತಿಗೆ ಡಿಕೆಶಿ ಹೇಳುವಂತೆ ಕ್ರಾಂತಿ ನಡೆಯಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.








