ಮುಂಬೈ: ಸೆಲ್ಫಿ ಹುಚ್ಚಿಗೆ ಬಿದ್ದು ಹಲವರು ಹಲವಾರು ಅವಾಂತರಗಳನ್ನು ಮಾಡಿಕೊಂಡಿರುವ ಘಟನೆ ಪ್ರತಿ ದಿನ ಬೆಳಕಿಗೆ ಬರುತ್ತಲೇ ಇವೆ. ಆದರೂ ಜನರು ಮಾತ್ರ ಎಚ್ಚೆತ್ತುಕೊಂಡಿಲ್ಲ. ಇಲ್ಲೋರ್ವ ಮಹಿಳೆ ಇದೇ ರೀತಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಆಳದ ಕಮರಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಮಹಾರಾಷ್ಟ್ರದ (Maharashtra) ಸತಾರಾದಲ್ಲಿ ನಡೆದಿದೆ. ಪುಣೆಯಿಂದ (Pune) ಸ್ನೇಹಿತರ ಜೊತೆ ಸತಾರಾ ಜಿಲ್ಲೆಯ ಬೋರ್ನ್ ಘಾಟ್‌ಗೆ ಬಂದಿದ್ದ ಮಹಿಳೆ ಥೋಸ್ಘರ್ ಎಂಬುವವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಜಲಪಾತದ ಹತ್ತಿರ 100 ಅಡಿ ಆಳದ ಕಮರಿಗೆ ಬಿದ್ದಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಗೃಹ ರಕ್ಷಕ ದಳ ಮತ್ತು ಸಹ ಪರ್ವತಾರೋಹಿಗಳು ಮಹಿಳೆಯನ್ನು ಸುರಕ್ಷಿತವಾಗಿ ಕಮರಿನಿಂದ ಹೊರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯನ್ನು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.