ರಾಜ್ಯದಲ್ಲಿ ಶಕ್ತಿ ಯೋಜನೆ ಗೆ ಚಾಲನೆ ಸಿಕ್ಕಿದ್ದು, ಬಸ್ ಹಾಗೂ ಸೀಟ್ ಗಾಗಿ ಪ್ರಯಾಣಿಕರು ಹಾಗೂ ಚಾಲಕ, ನಿರ್ವಾಹಕರ ಮಧ್ಯೆ ಗಲಾಟೆಗಳಾಗುತ್ತಿರುವ ವಿಡಿಯೋ ಆಗಾಗ ವೈರಲ್ ಆಗುತ್ತಿವೆ. ಇದರ ಮಧ್ಯೆ ಕಿಟಕಿಯಿಂದ ಬಸ್ ಹತ್ತಲು ಮುಂದಾಗಿದ್ದ ಮಹಿಳೆಯೊಬ್ಬರ ಕೈ ಕಟ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ಹರಿದಾಡುತ್ತಿದ್ದು, ಇದಕ್ಕೆ ಸಾರಿಗೆ ಸಂಸ್ಥೆ ಸ್ಪಷ್ಟನೆ ನೀಡಿದೆ.
ಕಿಟಿಕಿಯಿಂದ ಹತ್ತುವಾಗ ಮಹಿಳೆಯ ಕೈ ಕಟ್ ಆಗಿಲ್ಲ. ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಮಹಿಳೆ ಕೈಗೆ ಗಂಭೀರ ಗಾಯವಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಶಕ್ತಿ ಯೋಜನೆಯ ಕೊಡುಗೆಯಿಂದ ಮಹಿಳೆ ಕೈ ಕಳೆದುಕೊಳ್ಳಬೇಕಾಯ್ತು ಎಂದು ನೆಟ್ಟಿಗರು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕುರಿತು ಸಾರಿಗೆ ಸಂಸ್ಥೆ ಸುತ್ತೋಲೆ ಹೊರಡಿಸುವ ಮೂಲಕ ವಿಡಿಯೋ ಬಗ್ಗೆ ಸತ್ಯಾಸತ್ಯತೆ ತಿಳಿಸಿದೆ. ಮಹಿಳೆ ಬಸ್ಸಿನ ಕಿಟಕಿಯಿಂದ ಹತ್ತುವಾಗ ಕೈ ಮುರಿದಿದೆ ಎಂಬಂತೆ ಅಪಪ್ರಚಾರ ಮಾಡಲಾಗುತ್ತಿದೆ. ಅದು ಸುಳ್ಳು ಎಂದು ಹೇಳಿದೆ.
ಟಿ.ನರಸೀಪುರಕ್ಕೆ ತೆರಳುತ್ತಿದ್ದ ವೇಳೆ ಬಸವರಾಜಪುರದ ಬಳಿಯಲ್ಲಿ ಎದುರಿನಿಂದ ಬಂದ ಲಾರಿಯೊಂದು ಬಸ್ಸಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಿಟಕಿ ಬಳಿಯ ಸೀಟಿನಲ್ಲಿ ಕುಳಿತಿದ್ದ ಮಹಿಳೆಯ ಬಲಕೈಗೆ ಗಂಭೀರವಾದ ಗಾಯವಾಗಿದೆ ಎಂದು ಕೆಎಸ್ಆರ್ಟಿಸಿ ಸುತ್ತೋಲೆ ಮೂಲಕ ಸ್ಪಷ್ಟಪಡಿಸಿದೆ.
ಮಹಿಳೆಯನ್ನು ತಕ್ಷಣವೇ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಲಾರಿ ಚಾಲಕನ ವಿರುದ್ಧ ದೂರು ದಾಖಲಾಗಿದೆ. ಗಾಯಗೊಂಡಿರುವ ಮಹಿಳಾ ಪ್ರಯಾಣಿಕರ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.








