ಬೆಂಗಳೂರು: ರಾಜ್ಯದ ಸಾರ್ವಜನಿಕ ಸೇವೆಯಲ್ಲಿ ಶಿಸ್ತು ತರಲು ಮತ್ತು ಜನರ ಕೆಲಸಗಳು ವಿಳಂಬವಿಲ್ಲದೆ ನಡೆಯುವಂತೆ ಮಾಡಲು ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ತಾವು ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲೇ ಕಡ್ಡಾಯವಾಗಿ ವಾಸ್ತವ್ಯ ಹೂಡಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ನಿಯಮ ಉಲ್ಲಂಘಿಸುವ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
ಅಲೆದಾಟಕ್ಕೆ ಬಿತ್ತು ಬ್ರೇಕ್
ಹಲವು ಸರ್ಕಾರಿ ನೌಕರರು ಕೆಲಸ ಮಾಡುವ ಸ್ಥಳದಲ್ಲಿ ವಾಸವಿರದೆ, ದೂರದ ಊರುಗಳಿಂದ ಅಥವಾ ನಗರಗಳಿಂದ ದಿನನಿತ್ಯ ಓಡಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದ ಅಧಿಕಾರಿಗಳು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಿಲ್ಲ ಮತ್ತು ಸಾರ್ವಜನಿಕರು ಭೇಟಿ ನೀಡುವ ಸಮಯದಲ್ಲಿ ಲಭ್ಯವಿರುತ್ತಿಲ್ಲ. ಈ ಗಂಭೀರ ಲೋಪದ ಬಗ್ಗೆ ಉಪ ಲೋಕಾಯುಕ್ತರು ಸರ್ಕಾರಕ್ಕೆ ವರದಿ ನೀಡಿ, ಅಧಿಕಾರಿಗಳ ಈ ನಡವಳಿಕೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಹೊಸ ಸುತ್ತೋಲೆಯನ್ನು ಹೊರಡಿಸಿದೆ.
ನಿಯಮ ಮೀರಿದರೆ ಕಟ್ ಆಗಲಿದೆ ಸಂಬಳ
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಾದ ಕೆಸಿಎಸ್ಆರ್ ನಿಯಮ 13, 14 ಹಾಗೂ 15ನ್ನು ಉಲ್ಲೇಖಿಸಿರುವ ಸರ್ಕಾರ, ಪ್ರತಿಯೊಬ್ಬ ನೌಕರನು ಅಧಿಕೃತವಾಗಿ ನಿಗದಿಪಡಿಸಿದ ಕೇಂದ್ರ ಸ್ಥಾನದಲ್ಲೇ ನೆಲೆಸಬೇಕು ಎಂದು ನೆನಪಿಸಿದೆ. ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ನೌಕರ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ಒಂದು ವೇಳೆ ಅನುಮತಿ ಪಡೆಯದೆ ಹೊರಗೆ ವಾಸವಿದ್ದರೆ, ಅಂತಹ ದಿನಗಳ ವೇತನ ಮತ್ತು ಭತ್ಯೆಗಳನ್ನು ಪಡೆಯಲು ಆ ನೌಕರನು ಅರ್ಹನಾಗಿರುವುದಿಲ್ಲ ಎಂದು ಸರ್ಕಾರ ಎಚ್ಚರಿಸಿದೆ. ಗಜೆಟೆಡ್ ಅಧಿಕಾರಿಗಳು ಸಹ ಇಂತಹ ಅಶಿಸ್ತು ತೋರುತ್ತಿರುವುದು ಕಡತಗಳ ವಿಲೇವಾರಿಗೆ ದೊಡ್ಡ ಅಡ್ಡಿಯಾಗಿದೆ ಎಂದು ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರದ ಕಟ್ಟುನಿಟ್ಟಿನ ಕ್ರಮ
ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ. ಅವರು ಹೊರಡಿಸಿರುವ ಈ ಆದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು ಹಾಗೂ ನಿಗಮ ಮಂಡಳಿಗಳ ಮುಖ್ಯಸ್ಥರಿಗೆ ರವಾನಿಸಲಾಗಿದೆ. ಸಾರ್ವಜನಿಕರು ಕಚೇರಿಗೆ ಬಂದಾಗ ಅವರ ಅಹವಾಲುಗಳನ್ನು ಆಲಿಸಲು ಅಧಿಕಾರಿಗಳು ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ ಲಭ್ಯವಿರಬೇಕು ಎನ್ನುವುದೇ ಈ ಆದೇಶದ ಮುಖ್ಯ ಉದ್ದೇಶವಾಗಿದೆ. ಇಲಾಖಾ ಮುಖ್ಯಸ್ಥರು ತಮ್ಮ ಅಧೀನ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ್ತವ್ಯ ಹೂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ನಿಯಮ ಮೀರಿದವರ ವಿರುದ್ಧ ತಕ್ಷಣ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ.








