ಕೆಲಸದಿಂದ ತೆಗೆದಿದ್ದಕ್ಕೆ ಒಡತಿಗೆ ಬೆಂಕಿ ಹಚ್ಚಿದ ಕೆಲಸಗಾರ
ಮುಂಬೈ: ಕೆಲಸದಿಂದ ತನ್ನನ್ನು ತೆಗೆದು ಹಾಕಿದ್ದಕ್ಕೆ ವ್ಯಕ್ತಿಯೋರ್ವ ಮಹಿಳೆಗೆ ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿ, ತಾನು ಕೂಡ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ಮಹರಾಷ್ಟ್ರದಲ್ಲಿ ನಡೆದಿದೆ.
32 ವರ್ಷದ ಮಹಿಳೆ ಬಾಲಾ ಜಾನಿಂಗ್ ರನ್ನು ಮಿಲಿಂದ್ ನಾಥಸಾಗರ್ ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿ, ನಂತರ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಡೆದಿದ್ದೇನು?: ಪುಣೆಯ ಸೋಮನಾಥ ನಗರದಲ್ಲಿ ಮಹಿಳೆ ಬಾಲಾ ಜಾನಿಂಗ್ ಟೈಲರಿಂಗ್ ಅಂಗಡಿಯನ್ನು ಇಟ್ಟುಕೊಂಡಿದ್ದರು. ಮಿಲಿಂದ್ ನಾಥಸಾಗರ್ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಎಂಟು ದಿನಗಳ ಹಿಂದೆ ಮಿಲಿಂದ್ ನಾಥಸಾಗರ್‍ನನ್ನು ಬಾಲಾ ಜಾನಿಂಗ್ ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಕೋಪಗೊಂಡ ನಾಥಸಾಗರ್ ರಾತ್ರಿ 11 ಗಂಟೆ ಸುಮಾರಿಗೆ ಅಂಗಡಿಗೆ ತೆರಳಿ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಲೈಟರ್‍ನಿಂದ ಬೆಂಕಿ ಹಚ್ಚಿದ್ದಾನೆ. ಇದೇ ವೇಳೆ ನಾಥಸಾಗರ್ ಗೆ ಕೂಡ ಬೆಂಕಿ ಹೊತ್ತಿಕೊಂಡಿದ್ದು, ಸಾವನ್ನಪ್ಪಿದ್ದಾನೆ.
ಸದ್ಯ ಮಹಿಳೆಗೆ ಶೇ.90 ರಷ್ಟು ಸುಟ್ಟ ಗಾಯಗಳಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಘಟನೆಯಲ್ಲಿ ಸಮೀಪದಲ್ಲಿಯೇ ಮೊಬೈಲ್ ಅಂಗಡಿ ಇಟ್ಟಿದ್ದ ಮತ್ತೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಲು ಸ್ಥಳಕ್ಕೆ ಧಾವಿಸಿದಾಗ ಆತನಿಗೂ ಬೆಂಕಿ ತಗುಲಿದ್ದು, ಶೇ.35 ರಷ್ಟು ಸುಟ್ಟ ಗಾಯಗಳಾಗಿದೆ. ಇದೀಗ ಈತ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಚಂದನ್ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ಜಾಧವ್ ತಿಳಿಸಿದ್ದಾರೆ.
ಇದೀಗ ಮೃತನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.