ಬೆಂಗಳೂರು : ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣೇಶನ್ನು ಪ್ರತಿಷ್ಠಾಪಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.
ಕರಗದ ಮತ್ತು ಬಾವಿ, ಕೆರೆ, ಕುಂಟೆ, ಸರೋವರ, ನದಿ ನೀರನ್ನು ಕಲುಷಿತಗೊಳಿಸುವ ರಾಸಾಯನಿಕ ಬಣ್ಣ ಲೇಪಿತ, ಪಿಓಪಿ ಗಣಪತಿ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಮಾರಾಟ ಮಾಡಬಾರದು ಎಂದು ಸೂಚಿಸಿದ್ದಾರೆ.
ಜನ, ಜಾನುವಾರುಗಳ ಜೀವ ಉಳಿಸಲು ಮತ್ತು ಆರೋಗ್ಯ ರಕ್ಷಿಸಲು ಪಾಸ್ಟರ್ ಆಫ್ ಪ್ಯಾರೀಸ್ (ಪಿ.ಓ.ಪಿ.)ನಿಂದ ತಯಾರಿಸಿದ ಹಾಗೂ ಲೋಹಯುಕ್ತ ಅಪಾಯಕಾರಿ ರಾಸಾಯನಿಕ ಬಣ್ಣ ಬಳಸಿದ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ ಮಾಡದಂತೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ ಎಂದರು.
ಗಣೇಶ ಹಬ್ಬಕ್ಕೆ ಒಂದೂವರೆ ತಿಂಗಳು ಬಾಕಿ ಇದ್ದು, ಈಗಿನಿಂದಲೇ ಪಿಓಪಿ ಗೌರಿ, ಗಣಪತಿ ಮೂರ್ತಿಗಳನ್ನು ತಯಾರಿಸದಂತೆ, ಬೇರೆ ರಾಜ್ಯದಿಂದ ಮಾರುಕಟ್ಟೆ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಿದ್ದಾರೆ. ಮಂಟಪದ ಅಲಂಕಾರಕ್ಕೆ ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಅಲಂಕಾರಿಕ ವಸ್ತು ಬಳಸದೆ ಹತ್ತಿಯಿಂದ ಮಾಡಿದ ಸಾಂಪ್ರದಾಯಿಕ ಗೆಜ್ಜೆ, ವಸ್ತ್ರ ಬಳಸುವಂತೆ ಮತ್ತು ಪರಿಸರ ಉಳಿಸುವಂತೆ ಅವರು ಮನವಿ ಮಾಡಿದ್ದಾರೆ.






