WPL Final 2023 : ಮೊದಲ ಲೀಗ್ ನ ಮೊದಲ ಮುಕುಟಕ್ಕೆ ಮುತ್ತಿಟ್ಟ ಮುಂಬೈ ಇಂಡಿಯನ್ಸ್….
ಮೊಟ್ಟ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ಚೊಚ್ಚಲ ಚಾಂಪಿಯನ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದೆ. ಮುಂಬೈ ಹುಡುಗಿಯರ ಅಬ್ಬರದ ಮುಂದೆ ದೆಹಲಿ ಕ್ಯಾಪಿಟಲ್ಸ್ ಆಟ ಮಂಕಾಯಿತು. ಮುಂಬೈ ತಂಡ ಡೆಲ್ಲಿ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಗುರಿ ಬೆನ್ನತ್ತಿದ ಮುಂಬೈ ತಂಡ 19.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಇನ್ನು 3 ಎಸೆತಗಳು ಬಾಕಿ ಇರುವಾಗ 134 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಮುಂಬೈ ತಂಡದ ಪರ ನ್ಯಾಟ್ ಸೀವರ್ ಅರ್ಧಶತಕ ಸಿಡಿಸಿದ್ದರು. 55 ಎಸೆತಗಳಲ್ಲಿ 60 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೊಂದು ತುದಿಯಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್ (39 ಎಸೆತಗಳಲ್ಲಿ 37 ರನ್) ನಿರ್ಣಾಯಕ ಇನಿಂಗ್ಸ್ ಆಡಿದರು. ಮುಂಬೈ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ಚಾಂಪಿಯನ್ಸ್ ಎನಿಸಿಕೊಂಡಿತು.
23 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡ ಸಂಕಷ್ಟದಲ್ಲಿದ್ದ ಮುಂಬೈಗೆ ನ್ಯಾಟ್ ಸೆವರ್ ಬ್ರಂಟ್ ಮತ್ತು ಹರ್ಮನ್ ಪ್ರೀತ್ ಜೋಡಿ ಆಸರೆಯಾಯಿತು. ಡೆಲ್ಲಿ ಬೌಲರ್ ಗಳು ಬಿರುಸಿನ ಬೌಲಿಂಗ್ ದಾಳಿ ನಡೆಸಿದರೂ ಸಹ ಸಕಾಲದಲ್ಲಿ ವಿಕೆಟ್ ಕಬಳಿಸಲು ವಿಫಲರಾದರು. ಡೆಲ್ಲಿ ಬೌಲರ್‌ಗಳ ಪೈಕಿ ರಾಧಾ ಯಾದವ್ ಮತ್ತು ಜೋನಾಸೆನ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತಾದರೂ ದೊಡ್ಡ ಮೊತ್ತ ಗಳಿಸಲು ವಿಫಲವಾಯಿತು. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 131 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತು.
ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 29 ಎಸೆತಗಳಲ್ಲಿ 35 ರನ್, ಶಿಖಾ ಪಾಂಡೆ 27 ರನ್, ರಾಧಾ ಯಾದವ್ 27 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಬ್ಯಾಟಿಂಗ್ ನಲ್ಲಿ ಸದ್ದು ಮಾಡಲಿಲ್ಲ. ಒಂದು ಹಂತದಲ್ಲಿ ದೆಹಲಿಯ ಸ್ಕೋರ್ 100 ರ ಗಡಿ ದಾಟುತ್ತದೆಯೇ ಎನ್ನುವ ಅನುಮಾನವಿದ್ದಾಗ ಕೊನೆಯಲ್ಲಿ ಬಂದ ಶಿಖಾ ಪಾಂಡೆ ಮತ್ತು ರಾಧಾ ಯಾದವ್ ನಿರ್ಣಾಯಕ ಇನ್ನಿಂಗ್ಸ್ ಆಡಿದರು.
ಮುಂಬೈ ಬೌಲರ್‌ಗಳ ಪೈಕಿ ಇಸ್ಸಿ ವಾಂಗ್ ಮತ್ತು ಹೈಲಿ ಮ್ಯಾಥ್ಯೂಸ್ ತಲಾ 3 ವಿಕೆಟ್ ಪಡೆದರೆ, ಅಮೆಲಿಯಾ ಕೆರ್ 2 ವಿಕೆಟ್ ಕಬಳಿಸಿದರೆ. ಮುಂಬೈನ ಸೆನ್ಸೇಷನಲ್ ವೇಗಿ ಇಸ್ಸಿ ವಾಂಗ್ ಇನಿಂಗ್ಸ್‌ನ ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ವಿಧ್ವಂಸಕ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ (11) ಅವರನ್ನ ಔಟ್ ಮಾಡಿದರು. ಅದೇ ಓವರ್‌ನ ಐದನೇ ಎಸೆತದಲ್ಲಿ ಆಲಿಸ್ ಕಾಪ್ಸ್ ಅವರು ಡಕ್ ಔಟ್ ಆಗಿದ್ದು ಮುಂಬೈ ಪಾಳಯದಲ್ಲಿ ಹೆಚ್ಚು ಉತ್ಸಾಹ ಮೂಡಿಸಿತು. ಆ ಬಳಿಕ ಜೆಮಿಮಾ ರಾಡ್ರಿಗಸ್ (9) ವಿಕೆಟ್ ಪಡೆದು ಡೆಲ್ಲಿಗೆ ಸರಿಪಡಿಸಲಾಗದ ಪೆಟ್ಟು ನೀಡಿದರು.
WPL Final 2023 : Mumbai Indians kissed the first crown of the first league….