ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್(95*) ಹಾಗೂ ಟ್ರಾವಿಸ್ ಹೆಡ್(146*) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿದೆ.
ಲಂಡನ್ನ ಓವಲ್ನಲ್ಲಿ ಬುಧವಾರದಿಂದ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದಿರುವ ಆಸೀಸ್, ಮೊದಲ ದಿನದಂತ್ಯಕ್ಕೆ 85 ಓವರ್ಗಳಲ್ಲಿ 3 ವಿಕೆಟ್ಗೆ 327 ರನ್ಗಳಿಸಿದ್ದು, ಆ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಕಲೆಹಾಕುವತ್ತ ದಾಪುಗಾಲಿಟ್ಟಿದೆ. ಫೈನಲ್ನಲ್ಲಿ ಐತಿಹಾಸಿಕ ಶತಕ ಬಾರಿಸಿರುವ ಟ್ರಾವಿಸ್ ಹೆಡ್(146*) ಹಾಗೂ ಶತಕದ ಹೊಸ್ತಿಲಲ್ಲಿರುವ ಸ್ಟೀವ್ ಸ್ಮಿತ್(95*) ಶತಕದ ಹೊಸ್ತಿಲಲ್ಲಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲ ದಿನದಾಟದ ಬಹುಪಾಲು ಟೀಂ ಇಂಡಿಯಾ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದ ಸ್ಮಿತ್ ಹಾಗೂ ಹೆಡ್ ಜೋಡಿ, 4ನೇ ವಿಕೆಟ್ಗೆ ಅಜೇಯ 251* ರನ್ ಕಲೆಹಾಕಿದ್ದಾರೆ. ಆ ಮೂಲಕ ತವರಿನ ಹೊರಗಿನ ಪಂದ್ಯದಲ್ಲಿ ಅತ್ಯಧಿಕ ರನ್ಗಳ ಜೊತೆಯಾಟವಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ 1914ರಲ್ಲಿ ತವರಿನಿಂದ ಹೊರಗೆ ನಡೆದ ಟೆಸ್ಟ್ ಪಂದ್ಯದಲ್ಲಿ 200ಕ್ಕೂ ಅಧಿಕ ರನ್ಗಳ ಜೊತೆಯಾಟದ ಪ್ರದರ್ಶನ ನೀಡಿತ್ತು. ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚಾರ್ಲ್ಸ್ ಕೆಲ್ಲೇವೇ ಹಾಗೂ ವಾರೆನ್ ಬಾರ್ಡ್ಸ್ಲೆ 244 ರನ್ಗಳನ್ನ ಕಲೆಹಾಕುವ ಮೂಲಕ ಈ ದಾಖಲೆ ನಿರ್ಮಿಸಿದ್ದರು.