ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶಿಸುವ ಮೂಲಕ ಪ್ರಶಸ್ತಿ ಹೊಸ್ತಿಲಿಗೆ ಬಂದಿರುವ ಟೀಂ ಇಂಡಿಯಾ, ಜೂ.7ರಿಂದ ಆರಂಭವಾಗುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಚಾಲೆಂಜ್ ಎದುರಿಸಲು ಸಜ್ಜಾಗಿದೆ.
ಇಂಗ್ಲೆಂಡ್‌ನ ಓವಲ್ ಅಂಗಳದಲ್ಲಿ ನಡೆಯುವ ಮಹತ್ವದ ಪಂದ್ಯಕ್ಕಾಗಿ ಟೀಂ ಇಂಡಿಯಾದ ವೇಗಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದು, ತಂಡದ ಪ್ರಮುಖ ಬೌಲರ್ ಜಸ್ಪ್ರೀಬ್ ಬುಮ್ರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ವೇಗದ ಬೌಲರ್‌ಗಳು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ದೊಡ್ಡಮಟ್ಟದ ಕುತೂಹಲ ಮೂಡಿಸಿದೆ. ಬುಮ್ರ ಅನುಪಸ್ಥಿತಿಯಲ್ಲಿ ಭಾರತ ತಂಡದ ಮತ್ತೋರ್ವ ಪ್ರಮುಖ ವೇಗಿ ಮೊಹಮ್ಮದ್ ಶಮಿ ವೇಗದ ಬೌಲಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಇವರ ಜೊತೆಗೆ ಮೊಹಮ್ಮದ್ ಸಿರಾಜ್, ಶಾರ್ದೂಲ್ ಥಾಕೂರ್, ಜಯದೇವ್ ಉನಾದ್ಕಟ್ ಹಾಗೂ ಉಮೇಶ್ ಯಾದವ್ ಅವರುಗಳು ತಂಡದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ. ಇವರುಗಳು ಆಂಗ್ಲರ ನಾಡಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ ಎಂಬುದಕ್ಕೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಜಸ್ಪ್ರೀತ್ ಬುಮ್ರ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಭಾರತದ ಪ್ರಮುಖ ವೇಗದ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಇಂಗ್ಲೆಂಡ್ ನೆಲದಲ್ಲಿ ದೊಡ್ಡ ಸಕ್ಸಸ್ ಕಾಣದ ಶಮಿ, ಆಡಿರುವ 13 ಪಂದ್ಯಗಳಲ್ಲಿ 40.53ರ ಸರಾಸರಿಯಲ್ಲಿ 38 ವಿಕೆಟ್ ಪಡೆದಿದ್ದಾರೆ. ಟೀಂ ಇಂಡಿಯಾದ ಮತ್ತೋರ್ವ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಇಂಗ್ಲೆಂಡ್‌ನಲ್ಲಿ ಒಟ್ಟು 5 ಪಂದ್ಯಗಳನ್ನಾಡಿದ್ದು, 33.00ರ ಸರಾಸರಿಯಲ್ಲಿ 18 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.
ಟೆಸ್ಟ್ ತಂಡದಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಳ್ಳುವ ಶಾರ್ದೂಲ್ ಥಾಕೂರ್, ಇಂಗ್ಲೆಂಡ್ ಅಂಗಳದಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದು, 33.38ರ ಸರಾಸರಿಯಲ್ಲಿ 8 ವಿಕೆಟ್‌ಗಳನ್ನಷ್ಟೇ ಪಡೆದುಕೊಂಡಿದ್ದಾರೆ. ಟೀಂ ಇಂಡಿಯಾದ ಮತ್ತೋರ್ವ ವೇಗದ ಬೌಲರ್ ಉಮೇಶ್ ಯಾದವ್, ಆಡಿರುವ 2 ಪಂದ್ಯಗಳಲ್ಲಿ 23.56ರ ಬೌಲಿಂಗ್ ಸರಾಸರಿಯಲ್ಲಿ 9 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನೂ ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಜಯದೇವ್ ಉನಾದ್ಕಟ್, ಈವರೆಗೂ ಇಂಗ್ಲೆಂಡ್‌ನಲ್ಲಿ ಯಾವುದೇ ಟೆಸ್ಟ್ ಪಂದ್ಯವನ್ನ ಆಡಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಆಂಗ್ಲರ ನಾಡಿಗೆ ಬಂದಿರುವ ಎಡಗೈ ವೇಗಿ ಉನಾದ್ಕಟ್, ಆಸೀಸ್ ವಿರುದ್ಧದ ಫೈನಲ್‌ನಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.