ಟೀಂ ಇಂಡಿಯಾದ ವೇಗದ ಬೌಲರ್ಗಳ ಪ್ರಾಬಲ್ಯದ ನಡುವೆಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಟ್ರಾವಿಸ್ ಹೆಡ್ ಭರ್ಜರಿ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಆಸರೆಯಾದರಲ್ಲದೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಶತಕ ದಾಖಲಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಪಡೆದರು.
ಲಂಡನ್ನ ದಿ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಪಂದ್ಯದ ಮೊದಲ ದಿನದಾಟದ ಆರಂಭದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ಗಳು ಮೇಲುಗೈ ಸಾಧಿಸಿದರು. ಆದರೆ 4ನೇ ಕ್ರಮಾಂದಲ್ಲಿ ಕಣಕ್ಕಿಳಿದ ಟ್ರಾವಿಸ್ ಹೆಡ್, ಭಾರತೀಯ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಇನ್ನಿಂಗ್ಸ್ ಆರಂಭದಿಂದಲೇ ಜವಾಬ್ದಾರಿಯುತ ಆಟವಾಡಿದ ಹೆಡ್, ಭರ್ಜರಿ ಶತಕ ದಾಖಲಿಸಿ ಅಬ್ಬರಿಸಿದರು.
ಆ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಶತಕ ದಾಖಲಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಟ್ರಾವಿಸ್ ಹೆಡ್ ಪಾತ್ರರಾದರು. ಅಲ್ಲದೇ ಸ್ಟೀವ್ ಸ್ಮಿತ್ ಜೊತೆಗೂಡಿ 4ನೇ ವಿಕೆಟ್ಗೆ 150ಕ್ಕೂ ಅಧಿಕ ರನ್ಗಳ ಜೊತೆಯಾಟದ ಕಾಣಿಕೆ ನೀಡುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದರು.
ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ಕಣಕ್ಕಿಳಿಯುವ ಮುನ್ನ ಆಸ್ಟ್ರೇಲಿಯಾ 76 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು. ತಂಡದ ಪರ ಅಗ್ರ ಕ್ರಮಾಣಕದಲ್ಲಿ ಕಣಕ್ಕಿಳಿದ ಡೇವಿಡ್ ವಾರ್ನರ್(43), ಉಸ್ಮಾನ್ ಖವಾಜ(0) ಹಾಗೂ ಮಾರ್ನಸ್ ಲಬುಶೇನ್(26) ರನ್ಗಳಿಸಿ ಔಟಾದರು.