ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ಭರ್ಜರಿ ಆರಂಭ ಲಭಿಸಿದ್ದು, ಐತಿಹಾಸಿಕ ಪಂದ್ಯದ ಮೊದಲ ದಿನದಾಟ ಹಲವು ವಿಶೇಷ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.
ಲಂಡನ್‌ನ ದಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡಗಳ ನಡುವಿನ ಮಹತ್ವದ ಪಂದ್ಯದ ಮೊದಲ ದಿನದಾಟ ಹಲವು ಅವಿಸ್ಮರಣೀಯ ಸನ್ನಿವೇಶಗಳು ನಡೆಯಿತು. ದಿನದಾಟದ ಆರಂಭಕ್ಕೂ ಮೊದಲೇ ಉಭಯ ತಂಡಗಳ ಆಟಗಾರರು ಸಾಲಾಗಿ ನಿಂತು ರಾಷ್ಟ್ರಗೀತೆ ಹಾಡಿದ್ದು, ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನಕಾರಿ ಅನುಭವ ನೀಡಿತು.
ಇದೇ ವೇಳೆ ಉಭಯ ತಂಡಗಳ ಆಟಗಾರರು ಇತ್ತೀಚೆಗೆ ಒಡಿಶಾದಲ್ಲಿ ಸಂಭವಿಸಿದ ಭೀರಕ ರೈಲು ದುರಂತದಲ್ಲಿ ಮೃತಪಟ್ಟವರಿಗೆ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಅಲ್ಲದೇ ಭೀಕರ ಘಟನೆಯ ಹಿನ್ನೆಲೆಯಲ್ಲಿ ಎರಡು ತಂಡಗಳ ಆಟಗಾರರು ತೋಳಿಗೆ ಕಪ್ಪುಪಟ್ಟಿ ಧರಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಅವರಿಗೆ ಇದು 50ನೇ ಟೆಸ್ಟ್ ಪಂದ್ಯವಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ನಲ್ಲಿ ಭಾರತ ತಂಡವನ್ನ ಮುನ್ನಡೆಸುವ ಮೂಲಕ ನಾಯಕನಾಗಿ ಮೊದಲ ಬಾರಿಗೆ ಐಸಿಸಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನ ಮುನ್ನಡೆಸಿದರು.