ಟೀಂ ಇಂಡಿಯಾ ಬೌಲರ್ಗಳ ಆರಂಭಿಕ ಮೇಲುಗೈ ನಡುವೆಯೂ ಸ್ಟೀವ್ ಸ್ಮಿತ್(95*) ಹಾಗೂ ಟ್ರಾವಿಸ್ ಹೆಡ್(146*) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ದಿನದ ಗೌರವ ತನ್ನದಾಗಿಸಿಕೊಂಡಿದೆ.
ಲಂಡನ್ನ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದ ನಡುವೆಯೂ ಅನುಭವಿ ಸ್ಟೀವ್ ಸ್ಮಿತ್(95*) ಹಾಗೂ ಟ್ರಾವಿಸ್ ಹೆಡ್(146*) ಅವರುಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮೊದಲ ದಿನದಂತ್ಯಕ್ಕೆ 327/3 ರನ್ಗಳಿಸಿದ್ದು, ಆ ಮೂಲಕ ಬೃಹತ್ ಮೊತ್ತ ಕಲೆಹಾಕುವತ್ತ ಮುಖ ಮಾಡಿದೆ.
ಆಸೀಸ್ ಸಾಧಾರಣ ಆರಂಭ:
ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸೀಸ್ ಸಾಧಾರಣ ಆರಂಭ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಉಸ್ಮಾನ್ ಖವಾಜ(0) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ. ನಂತರ ಜೊತೆಯಾದ ಡೇವಿಡ್ ವಾರ್ನರ್(43) ಹಾಗೂ ಮಾರ್ನಸ್ ಲಬುಶೇನ್(26) ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಪರಿಣಾಮ ಆಸ್ಟ್ರೇಲಿಯಾ 76 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು.
ಸ್ಮಿತ್-ಹೆಡ್ ಬ್ಯಾಟಿಂಗ್ ಅಬ್ಬರ:
ಆದರೆ 4ನೇ ವಿಕೆಟ್ಗೆ ಜೊತೆಯಾದ ಅನುಭವಿ ಸ್ಟೀವ್ ಸ್ಮಿತ್(95*) ಹಾಗೂ ಟ್ರಾವಿಸ್ ಹೆಡ್(146*) ಟೀಂ ಇಂಡಿಯಾದ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದರು. ಪ್ರಮುಖವಾಗಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟ್ರಾವಿಸ್ ಹೆಡ್, ಆಕರ್ಷಕ ಬ್ಯಾಟಿಂಗ್ನಿಂದ ತಂಡಕ್ಕೆ ಆಸರೆಯಾದರು. ಇನ್ನಿಂಗ್ಸ್ನ ಆರಂಭದಿಂದಲೂ ಮಿಂಚಿದ ಹೆಡ್(146* ರನ್, 22 ಬೌಂಡರಿ, 1 ಸಿಕ್ಸ್) ಆಕರ್ಷಕ ಶತಕ ದಾಖಲಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸ್ಟೀವ್ ಸ್ಮಿತ್(95* ರನ್, 14 ಬೌಂಡರಿ) ತಂಡಕ್ಕೆ ಆಸರೆಯಾದರು. ಈ ಇಬ್ಬರು 4ನೇ ವಿಕೆಟ್ಗೆ ಅಜೇಯ 251 ರನ್ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನ 300ರ ಗಡಿದಾಟಿಸಿದರು. ಭಾರತದ ಪರ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಥಾಕೂರ್ ತಲಾ 1 ವಿಕೆಟ್ ಪಡೆದರು.