ಚಾಮುಂಡಿ ಬೆಟ್ಟದ ಪವಿತ್ರತೆಗೆ ಧಕ್ಕೆ ಬಾರದಂತೆ ಉಳಿಸಬೇಕೆಂಬ ಕೂಗಿನ ಬೆನ್ನಲ್ಲೇ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಸ್ತ್ರ ಸಂಹಿತೆ ಜಾರಿಗೆ ತಮ್ಮ ಧ್ವನಿಯನ್ನು ಸೇರಿಸಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಶಿಸ್ತಿನ ಬಳಕೆ ಅಗತ್ಯವಿದೆ ಎಂಬ ನಿಲುವನ್ನು ಅವರು ಪುನರುಚ್ಛರಿಸಿದ್ದಾರೆ.
ನಾನು ವಸ್ತ್ರ ಸಂಹಿತೆಯ ಪರವಾಗಿಯೇ ಇದ್ದೆನೆ. ಧಾರ್ಮಿಕ ಕ್ಷೇತ್ರಗಳತ್ತ ಜನರು ಧಾರ್ಮಿಕ ಭಾವನೆ, ಗೌರವ, ಹಾಗೂ ಶ್ರದ್ಧೆಯೊಂದಿಗೆ ಬರಬೇಕು. ಚಾಮುಂಡಿ ಬೆಟ್ಟದಲ್ಲೂ ತಿರುಪತಿ ಮಾದರಿಯಲ್ಲಿ ವಸ್ತ್ರ ಸಂಹಿತೆ ಜಾರಿಯಾಗಬೇಕು ಎಂದು ಯದುವೀರ್ ಒಡೆಯರ್ ಮಾಧ್ಯಮದವರಿಗೆ ಸ್ಪಷ್ಟಪಡಿಸಿದರು.
ಅಲ್ಲದೆ, ಇತ್ತೀಚೆಗೆ ಚಾಮುಂಡಿ ದೇವಿಯ ಮೂಲ ವಿಗ್ರಹದ ವಿಡಿಯೋ ಮಾಡಲಾಗುತ್ತಿರುವ ಘಟನೆಗಳು ಪವಿತ್ರತೆಯನ್ನು ಹಾಳು ಮಾಡುತ್ತಿರುವುದಾಗಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ದೇವಿಯ ಭಕ್ತಿಗಿಂತ ಮೊಬೈಲ್ ಫೋಟೋಗೆ ಹೆಚ್ಚು ಆದ್ಯತೆ ನೀಡುತ್ತಿರುವಂತಹ ಸ್ಥಿತಿ ನಿರಾಶಾಜನಕ. ಇಂಥದ್ದನ್ನು ತಡೆಯಲು ತಿರುಪತಿ ಮಾದರಿಯಲ್ಲಿ ಮೊಬೈಲ್ ನಿರ್ಬಂಧ ಕೂಡಾ ಚಾಮುಂಡಿ ಬೆಟ್ಟದಲ್ಲೂ ಜಾರಿಯಾಗಬೇಕು ಎಂದರು.
ಇದರಿಂದ ಚಾಮುಂಡಿ ಬೆಟ್ಟದ ವ್ಯವಸ್ಥಾಪನಾ ಸಮಿತಿಯು ಹಾಗೂ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನಿರೀಕ್ಷಿಸಬೇಕಾಗಿದೆ. ಏಕೆಂದರೆ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ದೇವಾಲಯದ ಒಳಚಿತ್ರಗಳು ವೈರಲ್ ಆಗುತ್ತಿರುವುದು ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.








