ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ತಮ್ಮ ಮಾತುಗಳಿಂದ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ನನಗೆ ಹಿರಿಯಣ್ಣನಂತೆ. ಅವರಿಗೂ ನನಗೂ ವೈಯಕ್ತಿಕವಾಗಿ ಅತ್ಯಂತ ಆತ್ಮೀಯ ಸಂಬಂಧವಿದೆ ಎಂದು ಹೇಳಿರುವ ಅವರು, ಇದೀಗ ತಮ್ಮ ಭವಿಷ್ಯದ ರಾಜಕೀಯ ನಿರ್ಧಾರಗಳ ಕುರಿತು ಮಾತನಾಡಿದ್ದಾರೆ.
ಈಶ್ವರಪ್ಪ ಈಚೆಗೆ ನಡೆದ ಬಿಎಸ್‌ವೈ ಮೊಮ್ಮಗನ ಅರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಮತ್ತೆ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ. ಈ ಕುರಿತು ಸ್ಪಷ್ಟನೆ ನೀಡಿದ ಈಶ್ವರಪ್ಪ, ನಾನು ಮತ್ತೆ ಬಿಜೆಪಿ ಸೇರಲ್ಲ. ಆದರೆ ರಾಜ್ಯದ ರಾಜಕೀಯದಲ್ಲಿ ಕುಟುಂಬ ರಾಜಕಾರಣ ನಿಲ್ಲಬೇಕು ಎಂದರು.
ಇಂದು ಬಿಜೆಪಿ ಹಿಂದುತ್ವದ ಮಾರ್ಗವನ್ನು ಬಿಟ್ಟು ಜಾತಿ ರಾಜಕಾರಣವನ್ನು ಮುಂದುವರೆಸುತ್ತಿದೆ ಎಂಬ ಆರೋಪವನ್ನು ಈಶ್ವರಪ್ಪ ಮಾಡಿದ್ದಾರೆ. ಇದೇ ಭಾವನೆ ಹಲವು ಕಾರ್ಯಕರ್ತರಲ್ಲಿ ಇದೆ. ಪಕ್ಷ ಇಂದು ಸಮಸ್ಯೆಗೊಳಗಾಗಿದೆ, ಆದರೆ ನಾಳೆ ಸುಧಾರಣೆ ಸಾಧ್ಯ ಎಂಬ ನುಡಿಗಳ ಮೂಲಕ, ಅವರು ಪಕ್ಷದ ಮೇಲಿನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಕುಟುಂಬ ರಾಜಕಾರಣ ವಿರುದ್ಧ ಗಂಭೀರ ಟೀಕೆ
ರಾಜ್ಯದಲ್ಲಿ ಇದೀಗ ತಲೆ ಎತ್ತುತ್ತಿರುವ ಕುಟುಂಬ ರಾಜಕಾರಣದ ಬಗ್ಗೆ ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ರಾಜಕಾರಣಿಯ ಕುಟುಂಬದಿಂದ ಮತ್ತೊಬ್ಬನು ಬರೋದು ಹಿತಕರವಲ್ಲ. ಜನತೆಗೆ ಇದರಿಂದ ತೊಂದರೆ ಆಗುತ್ತೆ ಎಂದು ತಮ್ಮ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಬಿಎಸ್‌ವೈ ಮತ್ತು ಈಶ್ವರಪ್ಪ ನಡುವೆ ಹಲವು ವರ್ಷಗಳ ರಾಜಕೀಯ-ವೈಯಕ್ತಿಕ ಸಂಬಂಧವಿದೆ. ಈಶ್ವರಪ್ಪ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ, ನಂತರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬಿಜೆಪಿಯಿಂದ ನಿರ್ಗಮಿಸಿ ಇತ್ತೀಚೆಗೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ, ಪಕ್ಷದ ಪ್ರಮುಖ ಮುಖಂಡರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನೂರಾರು ಪ್ರಶ್ನೆಗಳನ್ನು ಎಬ್ಬಿಸಿದೆ.