ನಟ ಚಿರಂಜೀವಿ ಸರ್ಜಾ (Chiranjeevi Sarja) ಇಹಲೋಕ ತ್ಯಜಿಸಿ ಇಂದಿಗೆ ಮೂರು ವರ್ಷಗಳೇ ಕಳೆದಿವೆ. ಹಠಾತ್ತಾಗಿ ನಿಧನ ಹೊಂದಿದ ಚಿರು ಆಗಷ್ಟೇ ಮದುವೆಯಾಗಿದ್ದರು. ಅಸಂಖ್ಯಾತ ಅಭಿಮಾನಿಗಳ ಜೊತೆ ಪ್ರೀತಿಯ ಮಡದಿಯನ್ನೂ ಅವರು ಬಿಟ್ಟು ಹೋಗಿದ್ದಾರೆ. ಸದ್ಯ ಚಿರು ಇಲ್ಲದೇ ದಿನಗಳನ್ನು ದೂಡುತ್ತಿರುವ ಪತ್ನಿ, ನಟಿ ಮೇಘನಾ ರಾಜ್, ಇಂದು ಪತಿಗಾಗಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಮೇಘನಾ ರಾಜ್, ‘ನನಗೆ ನಿನ್ನೆ, ನಾಳೆ, ಭವಿಷ್ಯವೂ ನೀನೇʼ ಎಂದು ಭಾವುಕರಾಗಿ ಸಾಲುಗಳನ್ನು ಬರೆದಿದ್ದಾರೆ. ಅಲ್ಲದೇ, ತಬ್ಬಿಕೊಂಡ ಫೋಟೋವನ್ನು ಶೇರ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅವರನ್ನು ಪುತ್ರನಲ್ಲಿ ಕಾಣುತ್ತಿರುವ ಮೇಘನಾ ರಾಜ್ (Meghana Raj) ರಾಯನ್ ರಾಜ್ ಸರ್ಜಾ (Rayaan Raj Sarja) ರನ್ನು ಶಾಲೆಗೆ ಕಳುಹಿಸಿದ್ದಾರೆ.
ಪೋಷಕರಾದ ಮೇಲೆ ಮಕ್ಕಳು ಮಾತ್ರವಲ್ಲ ನಾವು ಕೂಡ ಜೀವನ ಪ್ರತಿಯೊಂದು ಮೈಲಿಗಲ್ಲು ದಾಟುತ್ತೀವಿ ಎಂದು ಮೇಘನಾ ಬರೆದುಕೊಂಡಿದ್ದು. ಇಂದು ನಮ್ಮ ಜೀವನದ ತುಂಬಾ ಸ್ಪೆಷಲ್ ದಿನವಾಗಿದೆ. ರಾಯನ್ ರಾಜ್ ಸರ್ಜಾ ಸ್ಕೂಲ್ನ ಮೊದಲ ದಿನ ಇಂದು. ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ವಿದ್ಯಾಭ್ಯಾಸ, ಜ್ಞಾನ ಹಾಗೂ ಜೀವನದ ಅತಿ ಅಮೂಲ್ಯವಾದ ಪಾಠಗಳನ್ನು ಕಲಿಯುವುದ್ದಕ್ಕೆ ರಾಯನ್ ಮೊದಲ ಹೆಜ್ಜೆ ಇಡುತ್ತಿದ್ದಾನೆ. ನಿಮ್ಮ ಹಾರೈಕೆ ಮತ್ತು ಪ್ರೀತಿ ಅವನ ಮೇಲಿರಲಿ ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ. ಮೇಘನಾ ರಾಜ್ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ.