ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಎಂ.ಬಿ. ಪಾಟೀಲ್ ನಡುವಿನ ರಾಜಕೀಯ ವಾಕ್ಸಮರ ತಾರಕಕ್ಕೇರಿದ್ದು, ಯತ್ನಾಳ್ ಅವರ ಆರೋಪಗಳಿಗೆ ಪತ್ರಿಕಾಗೋಷ್ಠಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, “ನಿಮ್ಮಂತೆ ನಾನು ನಿರುದ್ಯೋಗಿಯಲ್ಲ, ನನ್ನ ಬಳಿ ನಿಮ್ಮ ದಮಕಿ ನಡೆಯುವುದಿಲ್ಲ, ನನ್ನ ವಿರುದ್ಧ ನಾಲಿಗೆ ಹರಿಬಿಟ್ಟರೆ ನಿಮ್ಮ ಜಾತಕವನ್ನೇ ಜಾಲಾಡಬೇಕಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜಕೀಯ ಅವಕಾಶವಾದಿತನ, ಭೂ ಹಗರಣದ ಆರೋಪ ಮತ್ತು ವೈಯಕ್ತಿಕ ಟೀಕೆಗಳಿಗೆ ಒಂದೊಂದಾಗಿ ಉತ್ತರಿಸಿ, ನೇರ ಸವಾಲುಗಳನ್ನು ಹಾಕಿದರು.
ಬಾಯಿಗೂ ಮಿದುಳಿಗೂ ಸಂಪರ್ಕವಿಲ್ಲದ ನಾಯಕ
“ಯತ್ನಾಳ ಗೌಡ್ರೇ, ನೀವು ಯಾರಿಗಾದರೂ ದಮಕಿ ಹಾಕಿ ಬಾಯಿಗೆ ಬಂದಂತೆ ಮಾತನಾಡಿರಬಹುದು, ಆದರೆ ನನ್ನ ಬಳಿ ಅದೆಲ್ಲ ನಡೆಯುವುದಿಲ್ಲ. ನಾನು ಯಾರಿಗೂ ಅಂಜುವವನಲ್ಲ. ಯತ್ನಾಳ್ ಅವರ ಬಾಯಿಗೂ ಮಿದುಳಿಗೂ ಸಂಪರ್ಕವಿಲ್ಲ. ಹಾಗಾಗಿಯೇ ನನ್ನ ವಿರುದ್ಧ ಅನಗತ್ಯವಾಗಿ ನಾಲಿಗೆ ಹರಿಬಿಟ್ಟಿದ್ದಾರೆ. ಹೀಗೆಯೇ ಮುಂದುವರಿದರೆ ಅವರ ಸಂಪೂರ್ಣ ಜಾತಕವನ್ನು ಜನರ ಮುಂದಿಡಬೇಕಾಗುತ್ತದೆ,” ಎಂದು ಎಂ.ಬಿ. ಪಾಟೀಲ್ ಗುಡುಗಿದರು.
ವೋಟಿಗಾಗಿ ವೇಷ ಬದಲಿಸುವ ಯತ್ನಾಳ್
ಯತ್ನಾಳ್ ಅವರ ಹಿಂದುತ್ವವಾದಿ ನಿಲುವನ್ನು ಪ್ರಶ್ನಿಸಿದ ಪಾಟೀಲ್, “ಉಚ್ಛಾಟಿತ ಹಿಂದೂ ಹುಲಿ ಎಂದು ಹೇಳಿಕೊಳ್ಳುವ ಯತ್ನಾಳ್, ಈ ಹಿಂದೆ ರಂಜಾನ್ ಸಂದರ್ಭದಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಆಯೋಜಿಸಿದ್ದರು. ಈದ್ಗಾ ಮೈದಾನದಲ್ಲಿ ನಮಾಜ್ ಮಾಡಿ, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ, ಟೊಪ್ಪಿ ಕೂಡ ಹಾಕಿದ್ದರು. ಅಂದು ಮುಸ್ಲಿಮರ ವೋಟಿಗಾಗಿ ಎಲ್ಲಾ ವೇಷಭೂಷಣಗಳನ್ನು ಹಾಕಿ ಮುಗಿಸಿದ್ದಾರೆ. ಈಗ ಹಿಂದೂಗಳ ವೋಟುಗಳಿಗಾಗಿ, ಯಾರನ್ನೋ ಮೆಚ್ಚಿಸಲು ಮುಸ್ಲಿಮರನ್ನು ಬೈಯುತ್ತಿದ್ದಾರೆ. ಇದು ಅವರ ಎರಡು ನಾಲಿಗೆಯ ನೀತಿಗೆ ಸಾಕ್ಷಿ,” ಎಂದು ಆರೋಪಿಸಿದರು.
ಪಂಚಪೀಠಗಳಿಗೂ ಬೈದ ವ್ಯಕ್ತಿ
ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ಸಚಿವರು, “ನಾನು ಜೀವನದಲ್ಲಿ ಎಂದಿಗೂ ಪಂಚಪೀಠಗಳಿಗೆ ಅಗೌರವ ತೋರಿಲ್ಲ. ಅವುಗಳ ಮೇಲೆ ನನಗೆ ಅಪಾರ ಭಕ್ತಿ, ಶ್ರದ್ಧೆ ಇದೆ. ಆದರೆ, ಯತ್ನಾಳ್ ಅವರು ಪಂಚಪೀಠಗಳಿಗೆ, ಜಂಗಮರಿಗೆ, ಹಾನಗಲ್ ಕುಮಾರಶ್ರೀಗಳಿಗೆ ಮತ್ತು ಶಿವಯೋಗ ಮಂದಿರಕ್ಕೂ ಬೈದು ಅವಮಾನಿಸಿದ್ದಾರೆ. ಈಗ ಲಿಂಗಾಯತ-ಲಿಂಗಾಯತರ ನಡುವೆ ಜಗಳ ಹಚ್ಚಿ, ಬಿಜೆಪಿ ಮತ್ತು ಆರೆಸ್ಸೆಸ್‌ನವರು ಮಜಾ ನೋಡುತ್ತಿದ್ದಾರೆ. ಇಂತಹ ಕುತಂತ್ರಗಳನ್ನು ನಾನು ಬಹಳ ನೋಡಿದ್ದೇನೆ,” ಎಂದರು.
ಭೂ ಹಗರಣದ ಆರೋಪಕ್ಕೆ ತಿರುಗೇಟು
ತಮ್ಮ ಮೇಲಿನ ಭೂ ಹಗರಣದ ಆರೋಪಕ್ಕೆ ಸವಾಲು ಹಾಕಿದ ಎಂ.ಬಿ. ಪಾಟೀಲ್, “ನನ್ನ ಹಿಂದೆ ಭೂ ಹಗರಣ ಮಾಡುವವರು ಇದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ನಾನು ಇದುವರೆಗೂ ಒಂದೇ ಒಂದು ಜಮೀನು ವ್ಯವಹಾರದಲ್ಲಿ ಭಾಗಿಯಾಗಿಲ್ಲ, ‘ಜಿ’ ಕೆಟಗರಿ ನಿವೇಶನವನ್ನೂ ಪಡೆದಿಲ್ಲ. ನಿಮ್ಮ ಆರೋಪ ನಿಜವೇ ಆಗಿದ್ದರೆ, ಆ ವ್ಯಕ್ತಿಗಳ ಹೆಸರು, ಸಾಕ್ಷಿ ಸಮೇತ ನೀಡಿ. ನಾನು ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ,” ಎಂದು ಸವಾಲೆಸೆದರು.
“ತಿಡಗುಂದಿ ಬಳಿ ನನ್ನ ಜಮೀನಿದೆ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಅಲ್ಲಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗಾಗಿ ಭೂಸ್ವಾಧೀನ ಮಾಡಲಾಗುತ್ತಿದೆಯೇ ಹೊರತು, ನನ್ನ ಯಾವುದೇ ಆಸ್ತಿ ಅಲ್ಲಿಲ್ಲ. ಬೇಕಿದ್ದರೆ ಮಖಣಾಪುರದಲ್ಲಿ ನಾನು ಖರೀದಿಸಿರುವ 135 ಎಕರೆ ಜಮೀನಿದೆ, ಅದನ್ನು ಯತ್ನಾಳ್‌ಗೆ ದಾನ ಮಾಡುತ್ತೇನೆ, ಬಂದು ತೆಗೆದುಕೊಳ್ಳಲಿ. ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ,” ಎಂದು ಎಚ್ಚರಿಸಿದರು.
ಅನುಭವ ಮಂಟಪವನ್ನೇ ಸೃಷ್ಟಿಸುತ್ತೇನೆ: ನೇರ ಸವಾಲು
ತಮ್ಮ ವಿರುದ್ಧ ಯತ್ನಾಳ್ ಸಮಾವೇಶ ನಡೆಸುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ನೀವು ಬಿಜೆಪಿ, ಆರೆಸ್ಸೆಸ್‌ನವರನ್ನು ಸೇರಿಸಿ ಸಮಾವೇಶ ಮಾಡಬಹುದು. ಆದರೆ ನನ್ನ ಹಿಂದೆ ಬಸವಣ್ಣನ ಅನುಯಾಯಿಗಳ ದೊಡ್ಡ ಶಕ್ತಿಯೇ ಇದೆ. ನೀವು ಮಾಡುವುದಕ್ಕಿಂತ ಎರಡು ಪಟ್ಟು ದೊಡ್ಡ ಸಮಾವೇಶ ಮಾಡುವ ಶಕ್ತಿಯನ್ನು ಬಸವಣ್ಣ ನನಗೆ ಕೊಟ್ಟಿದ್ದಾನೆ. ಬಸವ ದಳ, ಬಸವ ಸೇನೆ, ಅಂಬೇಡ್ಕರ್ ಅಭಿಮಾನಿಗಳು ಹಾಗೂ ಸಿದ್ದರಾಮಯ್ಯನವರ ಅಹಿಂದ ವರ್ಗದವರನ್ನು ಸೇರಿಸಿ ಹೊಸ ಅನುಭವ ಮಂಟಪವನ್ನೇ ಸೃಷ್ಟಿ ಮಾಡುತ್ತೇನೆ. ಅಂತಿಮವಾಗಿ ನಾನೋ, ನೀವೋ ಎಂಬುದನ್ನು ನೋಡೇ ಬಿಡೋಣ,” ಎಂದು ಯತ್ನಾಳ್‌ಗೆ ಬಹಿರಂಗ ಸವಾಲು ಹಾಕಿದರು.








